ಜಿಲ್ಲೆ

ದೇಶಕ್ಕೆ ಪುನಶ್ಚೇತನ ಕೊಟ್ಟವರು ವಿವೇಕಾನಂದರು

ಚಾಮರಾಜನಗರ: ಸ್ವಾಮಿ ವಿವೇಕಾನಂದರು ಜಡತ್ವ ತುಂಬಿದ ದೇಶಕ್ಕೆ ಪುನಶ್ಚೇತನ ಕೊಟ್ಟವರು ಎಂದು ಮೈಸೂರಿನ ರಾಮಕೃಷ್ಣಾಶ್ರಮದ ಸ್ವಾಮಿ ಸರ್ವಜಯಾನಂದಜಿ ಮಹಾರಾಜ್ ಬಣ್ಣಿಸಿದರು.
ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಯುವ ಸಬಲೀಕರಣ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಯೊಬ್ಬರೂ ಧರ್ಮ, ಸಂಸ್ಕೃತಿ ಉಳಿಸಲು ಸಂಕಲ್ಪ ಮಾಡಬೇಕು. ಧರ್ಮವು ಮನುಷ್ಯನಲ್ಲಿ ಸುಪ್ತವಾಗಿರುವ ದೈವತ್ವವನ್ನು ಪ್ರಕಟಿಸುವಂತೆ ಮಾಡುತ್ತದೆ. ಅಧ್ಯಾತ್ಮ ಆಲೋಚನೆಗೆ ಪರಿಶ್ರಮ, ತರಬೇತಿ ಬೇಕು. ಸ್ವಾಮಿ ವಿವೇಕಾನಂದರು ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡರು. ಸ್ವಾಮಿ ವಿವೇಕಾನಂದರ ಇಡೀ ವ್ಯಕ್ತಿತ್ವ ಭಾರತವಾಗಿತ್ತು ಎಂದರು.
ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಓದಬೇಕು. ಪ್ರತಿಯೊಂದು ಧರ್ಮವೂ ಅತ್ಯಂತ ಶ್ರೇಷ್ಠ ವ್ಯಕ್ತಿಯನ್ನು ನಿರ್ಮಾಣ ಮಾಡಿದೆ. ಧರ್ಮ ಹಾಗೂ ಅಧ್ಯಾತ್ಮದ ತಳಹದಿಯಲ್ಲಿ ದೇಶವನ್ನು ರೂಪಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಅವರವರ ಧರ್ಮವನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಅನುಷ್ಠಾನ ಮಾಡಿದರೆ ಸಮಾಜದಲ್ಲಿ ಸಾಮರಸ್ಯ ಸ್ಥಾಪಿಸಲು ಸಾಧ್ಯ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರು ದೇಶಾದ್ಯಂತ ಸಂಚರಿಸಿ ದೇಶದ ದುಃಸ್ಥಿತಿ, ದಾರಿದ್ರೃವನ್ನು ಕಂಡು ಮರುಗಿದರು. ಕನ್ಯಾಕುಮಾರಿಯಲ್ಲಿ ಬಂಡೆಯ ಮೇಲೆ ಧ್ಯಾನಾಸಕ್ತರಾಗಿ 3 ದಿನಗಳ ಕಾಲ ಕುಳಿತರು. ಭೂತ, ವರ್ತಮಾನ, ಭವಿಷ್ಯದ ಕುರಿತು ಧ್ಯಾನಿಸಿದರು. ಧರ್ಮ ಮತ್ತು ಅಧ್ಯಾತ್ಮವನ್ನು ನಿರ್ಲಕ್ಷೃ ಮಾಡಿರುವುದೇ ದೇಶವು ಹೀನಾಯ ಸ್ಥಿತಿಗೆ ತಲುಪಲು ಕಾರಣ ಎಂಬುದನ್ನು ಕಂಡುಕೊಂಡರು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಮಾತನಾಡಿ, ಯುವಜನತೆ ತಮ್ಮ ಚಿಂತನೆ, ವಿಚಾರ, ತರ್ಕವನ್ನು ರಾಷ್ಟ್ರ ನಿರ್ಮಾಣದ ಕಡೆ ಇಟ್ಟಾಗ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಯುವಜನತೆ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ತಲ್ಲೀನರಾಗುತ್ತಿದ್ದು, ಓದಿನ ಕಡೆ ಗಮನಹರಿಸುತ್ತಿಲ್ಲ. ಮಹಾತ್ಮರ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯ ಎ.ಆರ್.ಬಾಲರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರು ಸ್ಫೂರ್ತಿಯ ಚಿಲುಮೆಯಾಗಿದ್ದರು. ಅವರು ರಾಷ್ಟ್ರೀಯತೆ ಬಗೆಗೆ ಹೆಚ್ಚು ಒಲವು ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದರು. ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ವಿವಿಧ ಕಾಲೇಜುಗಳಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಜಿಲ್ಲೆಯ ವಿವಿಧ ಕಾಲೇಜುಗಳ ಹಲವು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ಶಾಸಕ ಸಿ.ಪುಟ್ಟರಂಗಶೆಟ್ಟಿ, ತಾಪಂ ಅಧ್ಯಕ್ಷೆ ಎಚ್.ಎನ್.ಶೋಭಾ, ತಹಸೀಲ್ದಾರ್ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಿ.ಎಸ್.ಕೃಷ್ಣಮೂರ್ತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಎಚ್.ಎಸ್.ಪ್ರೇಮಲತಾ ಇತರರಿದ್ದರು.