ತುಮಕೂರು: ಜೀವನದಲ್ಲಿ ಮೇಲೆ ಬರಲು ಸುಳ್ಳಿನ ಸರಮಾಲೆ, ಮೋಸ, ಕಪಟ, ವಂಚನೆ ಮಾತುಗಳು ಎಂದಿಗೂ ಸಹಾಯಕ್ಕೆ ಬರುವುದಿಲ್ಲ, ಸತ್ಯದ ನಡೆಯೊಂದೇ ನಮ್ಮ ಕೈ ಹಿಡಿಯುವುದು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ನಗರದ ಸರ್ಕಾರಿ ಪದವಿ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘ ಭಾನುವಾರ ಹಮ್ಮಿಕೊಂಡಿದ್ದ ಸ್ನೇಹ ಸಂಗಮ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ಇದೊಂದು ಆತ್ಮ ವಿಶ್ಲೇಷಣೆಯ ಕಾರ್ಯಕ್ರಮ. ಪುನರುಜ್ಜೀವನಕ್ಕೆ ನಾವು ಪಥ ಕಂಡುಕೊಳ್ಳುವ, ಸುಮಾರು 175 ಹಳೇ ವಿದ್ಯಾರ್ಥಿಗಳು ಪೊಲೀಸ್ ಕಾನ್‌ಸ್ಟೆಬಲ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ಹೆಮ್ಮೆಯ ಹಾಗೂ ಸಾರ್ಥಕತೆಯ ಕಾರ್ಯಕ್ರಮ ಎಂದು ಬಣ್ಣಿಸಿದರು.
ದೇಶದ ಕಷ್ಟ-ನಷ್ಟಗಳ ಬಗ್ಗೆ ಹೃದಯಂಗಮವಾಗಿ ಸ್ಪಂದಿಸುವ ಪ್ರಜೆಗಳನ್ನು ನಿರ್ಮಾಣ ಮಾಡುವ ಈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನನ್ನ ಮನಸ್ಸಿಗೆ ಬಹಳ ಹತ್ತಿರ ಎಂದು ಸಂತಸ ವ್ಯಕ್ತಪಡಿಸಿದರು.
ಯಾವಾಗ ನೀವು ಮೆರಿಟ್ ಕಾಪಾಡುವುದಕ್ಕಾಗುವುದಿಲ್ಲವೋ, ಯಾವಾಗ ನೀವು ಮೆರಿಟ್‌ಗೆ ಗೌರವ ಕೊಡುವುದಿಲ್ಲವೋ, ಸಹಜವಾಗಿ ಮೆರಿಟ್ ಇನ್ನೊಂದು ಕಡೆ ಹರಿಯುತ್ತದೆ. ನೂರು ಸವಲತ್ತುಗಳಲ್ಲಿ ಬದುಕುತ್ತಿದ್ದೇನೆ ಎನ್ನುವವರು ಸಾಮಾನ್ಯ ವ್ಯಕ್ತಿಯಾಗಿಯೇ ಬದುಕುತ್ತಾನೆ, ಆದರೆ ಮೆರಿಟ್ ಇರುವಾತ ವಿಶ್ವಪ್ರಜೆಯಾಗುತ್ತಾನೆ. ಮೆರಿಟ್ ಇದ್ದರೆ ಪ್ರಪಂಚ ನಿಮ್ಮನ್ನು ಬಯಸುತ್ತದೆ. ಮೆರಿಟನ್ನು ಅವಮಾನಿಸಿದರೆ, ಅಗೌರವಿಸಿದರೆ, ಮೆರಿಟ್ ಪಡೆದವರ ಕಣ್ಣಲ್ಲಿ ನೀರು ಹಾಕಿಸಿದರೆ ದೇಶಕ್ಕೆ ಖಂಡಿತ ಒಳ್ಳೆಯದಾಗಲ್ಲ ಎಂದು ಶ್ರೀಗಳು ಎಚ್ಚರಿಸಿದರು.
ಪ್ರಾಂಶುಪಾಲ ಪ್ರೊ.ಜಗದೀಶ್ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಅದರಲ್ಲಿಯೂ ಉನ್ನತ ಶಿಕ್ಷಣ ಪಡೆಯುತ್ತಿರುವ ಗ್ರಾಮೀಣ ಹೆಣ್ಣುಮಕ್ಕಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು, ಹಿಂದುಳಿದ ವರ್ಗದ ಮಕ್ಕಳೇ ಗಣನೀಯ ಸಂಖ್ಯೆಯಲ್ಲಿರುವ ನಮ್ಮ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ.ಚಿಕ್ಕಹನುಮಯ್ಯ ಮಾತನಾಡಿದರು. ಉಡುಪಿ ಜಿಲ್ಲೆ ಕಾರ್ಕಳ ನಗರ ಪೊಲೀಸ್ ಠಾಣೆ ಪಿಎಸ್‌ಐ ಎನ್.ರಂಗನಾಥ್, ನಿವೃತ್ತ ಪ್ರಾಚಾರ್ಯ ಪ್ರೊ.ಚಿಕ್ಕಹನುಮಯ್ಯ ಮತ್ತು ಬಿಸಿಎ ವಿಭಾಗದಲ್ಲಿ 7ನೇ ರ‌್ಯಾಂಕ್ ಪಡೆದ ಸೌಂದರ್ಯ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಕನ್ನಡ ಪ್ರಾಧ್ಯಾಪಕ ಮೇಜರ್ ಡಿ.ಚಂದ್ರಪ್ಪ, ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಆರ್.ಕೆ.ಶ್ರೀನಿವಾಸ್, ಪ್ರೊ.ಎ.ಆರ್.ಮಹೇಶ್, ಸುಹಾಸ್ ಮತ್ತಿತರರು ಇದ್ದರು.
ನಾನು ಜಾತಿಯಿಲ್ಲದ ಜಾಥಾ ಒಲ್ಲದ ಸ್ವಾಮೀಜಿ: ನಾನು ಜಾತಿಯಿಲ್ಲದ ಜಾಥಾ ಒಲ್ಲದ ಸ್ವಾಮೀಜಿ, ನನಗೆ ಪ್ರಾಯೋಗಿಕ ಬೆಳವಣಿಗೆಗಳು ಬೇಕೇ ಹೊರತು ಕ್ರಾಂತಿ ಅಲ್ಲ, ಜಗತ್ತಿನ ಇತಿಹಾಸದಲ್ಲಿ ಕ್ರಾಂತಿಗಳು ವಾಂತಿ ತಂದಿವೆ. ಯಾವ ಕ್ರಾಂತಿಯೂ ಮನುಷ್ಯನ ಅಭ್ಯುದಯವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಹೋಗಿಲ್ಲ ಎಂದು ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಯಜಮಾನನೇ ಇಲ್ಲ ಅಂದ್ರೆ...?: ರಾಜ್ಯದಲ್ಲಿ ಸುಮಾರು 400ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ, ಆದರೆ ಸುಮಾರು 398ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿ ಇವೆ. ಮನೆಯಲ್ಲಿ ಯಜಮಾನನೇ ಇಲ್ಲವಾದರೆ ಆ ಮನೆ ಹೇಗೆ ನಡೆಯುತ್ತದೆ ಎಂಬುದನ್ನು ಊಹಿಸಬಹುದು ಎಂದು ಬೇಸರ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡುವಂತೆ ಪರೋಕ್ಷವಾಗಿ ಮನವಿ ಮಾಡಿದರು.