ಚಿಕ್ಕಬಳ್ಳಾಪುರ: ಆಸ್ತಿಯ ಮಾಲೀಕತ್ವ ದೃಢಪಡಿಸಿ, ಅಕ್ರಮಗಳಿಗೆ ಕಡಿವಾಣ ಹಾಕುವ
ಸ್ವಾಮಿತ್ವ ಯೋಜನೆಯನ್ನು ಸದ್ವಿನಿಯೋಗಪಡಿಸಿಕೊಳ್ಳಲು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ವಿವೇಕ್ ಮಹದೇವ್ ಸಲಹೆ ನೀಡಿದರು.
ತಾಲೂಕಿನ ಕಮ್ಮಗುಟ್ಟಹಳ್ಳಿಯಲ್ಲಿ ಸ್ವಾಮಿತ್ವ ಯೋಜನೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾಮಿತ್ವ ಯೋಜನೆಯಡಿ ನಗರ ಹಾಗೂ ಗ್ರಾಮಠಾಣಾ ವ್ಯಾಪ್ತಿಯ ಎಲ್ಲ ಮನೆ, ನಿವೇಶನಗಳ ಅಳತೆ ಮಾಡಿ, ಬಳಿಕ ಸಂಬಂಧಿಸಿದ ದಾಖಲೆಗಳ ಪ್ರಾಪರ್ಟಿ ಕಾರ್ಡ್ (ಡಿಜಿಟಲ್ ಕಾರ್ಡ್)ನ್ನು ಮನೆ ನಿವೇಶನಗಳ ಮಾಲೀಕರಿಗೆ ಉಚಿತವಾಗಿ ನೀಡಲಾಗುತ್ತದೆ. ಇದು ಒಳ್ಳೆಯ ಯೋಜನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ವಾಮಿತ್ವ ಯೋಜನೆಯ ಮೇಲ್ವಿಚಾರಕ ಜಿ.ದೇವರಾಜ್, ಭೂ ಮಾಪಕರಾದ ಸಂತೋಷ್ ಮಧು, ಸುದರ್ಶನ್, ನವೀನ್ ಕುಮಾರ್, ಶಬನಮ್‌ತಾಜ್, ನವೀನ್, ಮಮತ, ಕಿಶೋರ್ ಮತ್ತಿತರರು ಇದ್ದರು.
*ಸ್ವಾಮಿತ್ವ ಯೋಜನೆಯಡಿ ದಾಖಲೆ*
*ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಸ್ವಾಮಿತ್ವ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಾರಿಗೊಳಿಸಲಾಗುತ್ತಿದೆ.
ಗ್ರಾಮ ಸಭೆಗಳಲ್ಲಿ ಯೋಜನೆಯಡಿ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದು ಬಳಿಕ ಗ್ರಾಮಕ್ಕೆ ಭೂಮಾಪಕರು ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ದಾಖಲೆಗಳೊಂದಿಗೆ ತೆರಳಿ, ಮನೆ ನಿವೇಶನದ ಸರ್ವೆ ಕೈಗೊಳ್ಳಲಿದ್ದು ಬಳಿಕ ಸಂಬಂಧಿಸಿದ ಪ್ರಾಪರ್ಟಿ ಕಾರ್ಡನ್ನು ತಯಾರಿಸಿ, ಮಾಲೀಕರಿಗೆ ನೀಡಲಾಗುತ್ತದೆ.
ಇದರಿಂದ ಜಾಗದ ದಾಖಲೆಗಳ ಸಂಗ್ರಹದ ಜತೆಗೆ ಅಕ್ರಮಗಳಿಗೆ ಅವಕಾಶ ಇಲ್ಲದಾಗುತ್ತದೆ ಎನ್ನುವುದು ಅಧಿಕಾರಿಗಳ ಮಾತು.