ಹುಬ್ಬಳ್ಳಿ : ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ 50ನೇ ವರ್ಷದ ಜನ್ಮ ದಿನವನ್ನು ಭಕ್ತರು ಆಚರಿಸುತ್ತಿದ್ದಾರೆ. ಆದರೆ, ಈ ಜನ್ಮದಿನವನ್ನು ಲೋಕಕಲ್ಯಾಣಕ್ಕೆ ಬಳಸಿಕೊಳ್ಳಲು ಶ್ರೀ ಗುಣಧರನಂದಿ ಮಹಾರಾಜರು ನಿರ್ಧರಿಸಿದ್ದಾರೆ.
ವಿಶ್ವವಿಖ್ಯಾತ 61 ಅಡಿ ಭಗವಾನ್ ಪಾರ್ಶ್ವನಾಥ ಮೂರ್ತಿ ಸ್ಥಾಪನಾ ಕರ್ತೃ, ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಸ್ವರ್ಣ ಜನ್ಮ ಜಯಂತಿ ಮಹಾ ಮಹೋತ್ಸವನ್ನು ಹುಬ್ಬಳ್ಳಿ ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಸೆ. 18, 19 ಹಾಗೂ 20ರಂದು ಆಯೋಜಿಸಲಾಗಿದೆ. ಈ ಮೂರು ದಿನಗಳಂದು ನವಗ್ರಹ ತೀರ್ಥಕ್ಷೇತ್ರದಲ್ಲಿ ಹಲವಾರು ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ಆದರೆ, ಈ ಮಹಾಮಹೋತ್ಸವ ಕೇವಲ ಮೂರು ದಿನಗಳಿಗೆ ಸೀಮಿತವಾಗದೆ, ವರ್ಷವಿಡೀ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಶ್ರೀ ಗುಣಧರನಂದಿ ಮಹಾರಾಜರು ತೀರ್ವನಿಸಿದ್ದಾರೆ.
ಇದರೊಂದಿಗೆ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣ ಒದಗಿಸಲು ಸಹ ನಿರ್ಧರಿಸಿದ್ದಾರೆ. ಹೀಗಾಗಿ, ಈ ಸ್ವರ್ಣ ಜನ್ಮಜಯಂತಿ ಮಹಾಮಹೋತ್ಸವವು ಕೇವಲ ಶ್ರೀ ಗುಣಧರನಂದಿ ಮಹಾರಾಜರು ಅಥವಾ ಅವರ ಭಕ್ತರಿಗೆ ಸೀಮಿತವಾಗದೆ, ಲೋಕಕಲ್ಯಾಣಕ್ಕೆ ಬಳಕೆಯಾಗಲಿದೆ. ಇದರ ಲಾಭ ಜಾತ್ಯತೀತವಾಗಿ ಸಾವಿರಾರು ಬಡ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ದೊರಕಲಿದೆ.
ಮುಂಬರುವ ಶೈಕ್ಷಣಿಕ ವರ್ಷದಿಂದ ಐದು ಸಾವಿರ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಸ್ವಾಮೀಜಿ ನಿರ್ಧರಿಸಿದ್ದಾರೆ. ಈ ಸೌಲಭ್ಯವನ್ನು ಜಾತಿಬೇಧ ಇಲ್ಲದೇ ಎಲ್ಲ ವರ್ಗದ ವಿದ್ಯಾರ್ಥಿಗಳು ಪಡೆಯಬಹುದು. ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣದ ಸೌಲಭ್ಯ ಇದೆ. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಒಬ್ಬರು ಪ್ರಾಥಮಿಕ ಶಿಕ್ಷಣಕ್ಕೆ ಕಾಲಿಟ್ಟರೆ, ಆತ 10ನೇ ತರಗತಿವರೆಗೆ ಉಚಿತವಾಗಿ ಓದಬಹುದು. ಅಷ್ಟೇ ಅಲ್ಲ, ವರೂರು ಕ್ಷೇತ್ರದಲ್ಲಿರುವ ಪದವಿ, ಇಂಜಿನಿಯರಿಂಗ್, ಬಿಎಎಂಎಸ್, ಹೋಮಿಯೋಪಥಿ ಶಿಕ್ಷಣ ಮಹಾವಿದ್ಯಾಲಯದಲ್ಲಿಯೂ ಈ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಮುಂದುವರೆಸಬಹುದು.
ಇದರೊಂದಿಗೆ ನೂರು ಊರುಗಳಲ್ಲಿ ವರ್ಷಪೂರ್ತಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ. ಸ್ವರ್ಣಜಯಂತಿ ಮಹಾಮಹೋತ್ಸವದ ಪೂಜೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ 1,500 ಸೀರೆ (ವಸ್ತ್ರದಾನ) ವಿತರಿಸಲಾಗುತ್ತಿದೆ. ಈ ಮಹಾಮಹೋತ್ಸವ ಪೂರ್ಣಗೊಂಡ ನಂತರ 1,500 ಬಡ ಜನರಿಗೆ ಉಚಿತವಾಗಿ ಕರ್ನಾಟಕದ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಲು ತೀರ್ವನಿಸಲಾಗಿದೆ. 50 ಜನ ಅಂಗವಿಕಲರಿಗೆ ಉಚಿತ ಕೃತಕ ಕಾಲು ಜೋಡಣೆ ಮಾಡಲಾಗುವುದು. 50 ಅನಾಥ ಆಶ್ರಮಗಳಲ್ಲಿ ಆಹಾರ ಒದಗಿಸಲಾಗುವುದು. ಧಾರ್ವಿುಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಉನ್ನತ ಸೇವೆ ಸಲ್ಲಿಸಿದ 50 ಗ್ರಾಮಗಳಲ್ಲಿನ ತಲಾ ಒಬ್ಬರಿಗೆ ನವಗ್ರಹ ಪುರಸ್ಕಾರ ನೀಡಲಾಗುವುದು.
ಮೂರು ದಿನಗಳ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕರಾದ ರಾಜೇಶ ಕೃಷ್ಣನ್, ವಿಜಯ ಪ್ರಕಾಶ, ಅನುಪ ಜಲೋಟ, ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ನಿರೂಪಕಿ ಅನುಶ್ರೀ ಸೇರಿದಂತೆ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮಜಾಭಾರತ, ಗಿಚ್ಚಿ ಗಿಲಿಗಿಲಿ ಹಾಗೂ ಇನ್ನಿತರ ತಂಡಗಳ ಕಲಾವಿದರು ಭಾಗವಹಿಸುವರು.