ಜಿಲ್ಲೆ

ಅಮಲಿ ಮಠದ ಅಧಿಕಾರ ಹಸ್ತಾಂತರ

ಎ. ಆರ್. ರಘುರಾಮ

ಸಾಲಿಗ್ರಾಮ: ತಾಲೂಕಿನ ಮಿರ್ಲೆ ಹೋಬಳಿ ನರಚನಹಳ್ಳಿ ಗ್ರಾಮದ ಅಮಲಿ ಮಠದ ಪೀಠಾಧ್ಯಕ್ಷರಾಗಿ ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಉಪ ಸ್ಥಿತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ಮಿಕ ವಿಧಿಗಳಿಗೆ ನೂರಾರು ಭಕ್ತರು ಸಾಕ್ಷಿಯಾದರು. ಬ್ರಾಹ್ಮ ಮುಹೂರ್ತದಲ್ಲಿ ಹೋಮ, ಹವನಗಳನ್ನು ನಡೆಸಿ, ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಪೀಠದ ಜವಾಬ್ದಾರಿ ವಹಿಸಲಾಯಿತು.

ಬಳಿಕ ಸಂದೇಶ ನೀಡಿದ ಶ್ರೀ ಗುರುಶಾಂತ ಸ್ವಾಮೀಜಿ, ಅಮಲಿ ಮಠದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತೇನೆ ಎಂದರು. ಮಠಕ್ಕೆ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲು ಶೀಘ್ರವೇ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಠಗಳು ನಾಡಿನ ಆಸ್ತಿ ಎಂದರು. ಜನ ಸಾಮಾನ್ಯರಿಗೆ ಜ್ಞಾನ ನೀಡುವುದರೊಂದಿಗೆ ನಿರಂತರ ದಾಸೋಹ ಕಾರ್ಯಕ್ರಮ ನಡೆಸಬೇಕು. ಆ ಮೂಲಕ ನಾಡಿಗೆ, ದೇಶಕ್ಕೆ ಒಳಿತಾಗುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ನಿರ್ವಹಿಸಬೇಕು ಎಂದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಣ್ಣೀರುಹಳ್ಳ ಮಠದ ಶ್ರೀ ವಿಜಯ ಕುಮಾರ ಸ್ವಾಮೀಜಿ, ಕರ್ಪೂರವಳ್ಳಿ ಮಠದ ಶ್ರೀ ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಲಾಲನಹಳ್ಳಿಯ ಗುರುಮಲ್ಲೇಶ್ವರ ದಾಸೋಹ ಮಠದ ಜಯದೇವಿ ತಾಯಿ, ಕಲ್ಯಾಣಪುರದ ಬಸವೇಶ್ವರ ಮಠದ ಚಿನ್ಮಯಿತಾಯಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹಿನಕಲ್ ಬಸವರಾಜು, ಮಾಜಿ ಅಧ್ಯಕ ಕಾನ್ಯ ಶಿವಮೂರ್ತಿ, ನಿವೃತ್ತ ಶಿಕ್ಷಕ ಸೋಮಶೇಖರ್, ಮುಖಂಡರಾದ ಗಾಯನಹಳ್ಳಿ ಕುಮಾರ ಸ್ವಾಮಿ, ಕೆ.ಬಿ. ಚಂದ್ರಶೇಖರ್, ಚಿದಾನಂದ, ಗ್ರಾಪಂ ಸದಸ್ಯ ಮಂಜು, ಅನಿಲ್ ಸೇರಿದಂತೆ ಮಠದ ಭಕ್ತರು, ಗ್ರಾಮಸ್ಥರು ಹಾಜರಿದ್ದರು.