ಜಿಲ್ಲೆ

ಸ್ವಾಮೀಜಿಗಳಿಗೆ ಜೀವ ಬೆದರಿಕೆ ಹಾಕುವವರ ಬಂಧಿಸಿ

ಬೆಳಗಾವಿ: ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಗೆ ಜೀವ ಬೆದರಿಕೆ ಹಾಕುತ್ತಿರುವ ವೈಚಾರಿಕ ಚಿಂತನೆಗಳ ವಿರೋಧಿ ಮತಾಂಧರನ್ನು ತಕ್ಷಣ ಬಂಧಿಸಿ ಅವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಬಸವಾಭಿಮಾನಿ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಬಳಿಕ ಡಿಸಿ ಮೂಲಕ ಮುಖ್ಯಮಂತ್ರಿ, ಗೃಹಸಚಿವರಿಗೆ ಮನವಿ ಸಲ್ಲಿಸಿದರು.

ಬಸವಾದಿ ಶರಣರ ವೈಚಾರಿಕ ಚಿಂತನೆಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ನಿಜಗುಣಪ್ರಭು ಸ್ವಾಮೀಜಿ ವೈಚಾರಿಕ ಚಿಂತನೆಗಳನ್ನು ಅರಗಿಸಿಕೊಳ್ಳಲಾಗದ ಕೆಲ ಮತಾಂಧರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಬೆದರಿಕೆ ಹಾಕುತ್ತಿರುವ ಹೇಡಿಗಳನ್ನು ತಕ್ಷಣ ಬಂಧಿಸಬೇಕು. ಜತೆಗೆ ಹೆಚ್ಚಿನ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ, ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ್, ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್.ದರ್ಗೆ, ಅಶೋಕ ಮಳಲಿ, ಅಡಿವೆಪ್ಪ ಬೆಂಡಿಗೇರಿ, ಎಸ್.ಜಿ.ಸಿದ್ನಾಳ, ರಾಜು ಕುಂಡಗೋಳ, ಕಾಶಪ್ಪ ಉಪ್ಪಿನ, ವಿ.ಕೆ.ಪಾಟೀಲ, ರಾಜು ಮಗದುಮ್ಮ, ಕೆ.ಶರಣಪ್ರಸಾದ, ಆನಂದ ಗುಡಸ್, ಪ್ರಭು ಬೆಣ್ಣಿ, ಸಿದ್ರಾಮ ಸಾವಳಗಿ, ಮಹಾಂತೇಶ ದಿ., ಬಿ.ಪಿ.ಜವಣಿ ಇತರರು ಇದ್ದರು.