ಜಿಲ್ಲೆ

ಬಸವಾದಿ ಶಿವಶರಣರ ತತ್ವಾದರ್ಶಗಳು ಪ್ರಸ್ತುತ;ಡಾ.ಬಿ.ಟಿ.ಚೇತನ ಅಭಿಮತ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ:ಅಪ್ರತಿಮ ಕ್ರಾಂತಿಯAಗೈದ ಬಸವಾದಿ ಶಿವಶರಣರ ತತ್ವಾದರ್ಶಗಳು  ೨೧ನೇ ಶತಮಾನದಲ್ಲಿಯೂ ಪ್ರಸ್ತುತವಾಗಿವೆ. ಅವರ ತತ್ವಗಳನ್ನು ಇಂದಿನ ಸಮಾಜಕ್ಕೆ ಮುಟ್ಟಿಸುವಲ್ಲಿ ಅನೇಕ ಶರಣರ ತ್ಯಾಗ ಪರಿಶ್ರಮವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಕಣಕುಂಬಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಽಕಾರಿ ಡಾ.ಬಿ.ಟಿ.ಚೇತನ ಹೇಳಿದರು.
 ಶಿವಬಸವನಗರದ ಲಿಂಗಾಯತ ಭವನದಲ್ಲಿ ಮಂಗಳವಾರ ಜಿಲ್ಲಾ ಘಟಕದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ  ಬಸವೋತ್ತರ ಕಾಲದ ಶರಣರ ಕ್ರಾಂತಿ ವಿಷಯ ಕುರಿತು ಮಾತನಾಡಿದ ಅವರು, ೧೨ ರಿಂದ ೧೫ನೇ ಶತಮಾನದಲ್ಲಿ ಹರಿಹರ, ಪಾಲ್ಕುರಿಕೆ ಸೋಮನಾಥ, ಭೀಮಕವಿ, ವಿಜಯನಗರದ ಅರಸ ಪ್ರೌಢದೇವರಾಯ ಬಸವ ತತ್ವ ಪ್ರಸಾರದಲ್ಲಿ ಮಹತ್ತರ ಕಾರ್ಯ ಮಾಡಿದ್ದಾರೆ. ಅದರಂತೆಯೇ ೧೫ನೇ ಶತಮಾನದಲ್ಲಿ ಎಡೆಯೂರು  ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅಳಿವಿನಂಚಿನಲ್ಲಿದ್ದ ಶರಣ ಪರಂಪರೆ ಮತ್ತು ಸಂಸ್ಕೃತಿಯನ್ನು ಪುನರುತ್ಥಾನ ಮಾಡಿದ್ದಾರೆ.
 ಬಸವಲಿಂಗ ಶರಣರ ಅನನ್ಯ ಕೊಡುಗೆಯೇ ಇಂದಿನ ವೀರಶೈವ ಲಿಂಗಾಯತ ಸಮಾಜದ ಭದ್ರಬುನಾದಿಯಾಗಿದೆ.ನಮ್ಮ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಶೈಕ್ಷಣಿಕವಾಗಿ ಮತ್ತು ನೈತಿಕವಾಗಿ ಶ್ರೀಮಂತವಾಗಿದೆ ಎಂದರೆ ಅದಕ್ಕೆ ಕಾರಣ ೧೯-೨೦ನೇ ಶತಮಾನದಲ್ಲಿ ಆಗಿ ಹೋದ ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಹಾನಗಲ್ಲ  ಕುಮಾರ ಸ್ವಾಮಿಗಳು, ಧಾರವಾಡದ  ಮೃತ್ಯಂಜಯ ಅಪ್ಪಗಳು, ಡಾ. ಫ. ಗು. ಹಳಕಟ್ಟಿಯವರು, ಶಿರಸಂಗಿಯ ಲಿಂಗರಾಜ ದೇಸಾಯಿಯವರು, ಚಿತ್ರದುರ್ಗದ ಜಯದೇವ ಜಗದ್ಗುರುಗಳು, ಪಂ. ಪಂಚಾಕ್ಷರಿ ಗವಾಯಿಗಳು, ಸಿದ್ದಗಂಗೆಯ ಶ್ರೀ ಶಿವಕುಮಾರ ಶಿವಯೋಗಿಗಳು ಇತ್ಯಾದಿ ಅನೇಕಾನೇಕ ಮಹಾತ್ಮರ ದಿವ್ಯದೃಷ್ಟಿ, ಕಾರ್ಯಕ್ಷಮತೆ, ಸೇವೆ ಮತ್ತು ಸಾಮಾಜಿಕ ಕ್ರಾಂತಿಯ ಸಲುವಾಗಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ಈ ಎಲ್ಲ ಮಹಾತ್ಮರ ಅನನ್ಯ ಪರಿಶ್ರಮದ ಫಲವೇ ಇಂದಿನ ಸದೃಢವಾದ ಶರಣ ಪರಂಪರೆಯ ವೀರಶೈವ ಲಿಂಗಾಯತ ಸಮಾಜ ರೂಪಗೊಳ್ಳಲು ಸಾಧ್ಯವಾಯಿತೆ ಎಂದು ಹೇಳಿದರು.
 ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ರತ್ನಪ್ರಭಾ ಬೆಲ್ಲದ, ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ರಮೇಶ ಕಳಸಣ್ಣನವರ, ಸಿ.ಎಸ್.ಹುಲಿಕಂಠಿಮಠ, ನ್ಯಾಯವಾದಿ ವ್ಹಿ.ಕೆ.ಪಾಟೀಲ, ಆಶಾ ಯಮಕನಮರಡಿ ಇತರರಿದ್ದರು.