ತುಮಕೂರು ; ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಡವರು ಹಾಗೂ ರೈತರ ಪರವಾದ ಚಿಂತನೆಗಳನ್ನು ಇಟ್ಟುಕೊಂಡು ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಲಿ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಶ್ರೀಗಳು ಆಶಿಸಿದರು.
ಸಿದ್ಧಗಂಗಾ ಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ರಾಜ್ಯ ಯುವ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ‘ಸಿದ್ಧಗಂಗಾ ಅರಣ್ಯ ದಟ್ಟ ಕಾಡು ನಿರ್ಮಾಣ 5000 ಗಿಡ ನೆಡುವ ಕಾರ್ಯಕ್ರಮ’ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೊಮ್ಮಾಯಿ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ರಾಜಕಾರಣದಲ್ಲಿ ಅನುಭವಿ ಎನಿಸಿದ್ದಾರೆ. ಸಿಎಂ ಹುದ್ದೆಗೇರಿರುವುದು ಸಂತೋಷ ತಂದಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕರೊನಾ ಸಂಕಷ್ಟ ಹಾಗೂ ಅತಿವೃಷ್ಟಿ ಸಮಸ್ಯೆ ರಾಜ್ಯವನ್ನು ಕಾಡುತ್ತಿದೆ. ಕರಾವಳಿ ಹಾಗೂ ಬೆಳಗಾವಿ ಭಾಗದಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ತಕ್ಷಣವೇ ಮುಖ್ಯಮಂತ್ರಿಗಳು ಆ ಭಾಗದ ಜನರ ನೆರವಿಗೆ ಧಾವಿಸಲಿ. ಅಭಿವೃದ್ಧಿ ಪಥದಲ್ಲಿ ರಾಜ್ಯವನ್ನು ಕೊಂಡೊಯ್ಯಲಿ ಎಂದರು.
ಜನಪರ ಆಡಳಿತ ಕೊಡಲಿ : ರಾಜ್ಯದ ಹೊಸ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಜನಪರ ಆಡಳಿತ ಕೊಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಇಡೀ ರಾಜ್ಯ ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಕರೊನಾದಿಂದ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಾಕ್‌ಡೌನ್‌ನಿಂದ ಲಕ್ಷಾಂತರ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಒಂದೆಡೆ ಕರೊನಾ, ಮತ್ತೊಂದೆಡೆ ಪ್ರವಾಹದಿಂದಾಗಿ ಪ್ರಕೃತಿ ವಿಕೋಪ ಎದುರಾಗಿದ್ದು ಇದನ್ನು ಸಮರ್ಥವಾಗಿ ನಿಭಾಯಿಸಲಿ. ಎಲ್ಲಿ ಪ್ರಾದೇಶಿಕ ಅಸಮತೋಲನೆ ಇದೆ. ಇನ್ನು ಸರ್ಕಾರದಲ್ಲಿರುವ ತೊಡಕುಗಳನ್ನು ನಿವಾರಣೆ ಮಾಡಿ ರಾಜ್ಯದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಿ ಎಂದರು.
ಜನ ನೋಡಿದ್ದಾರೆ: ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ಬಿಜೆಪಿ ಆಂತರಿಕ ವಿಚಾರ. ಬಿಎಸ್‌ವೈ ಸಾಕಷ್ಟು ಹೋರಾಟದಿಂದ ಬಂದಿದ್ದಾರೆ. ಮೋದಿ, ಅಮಿತ್ ಶಾ ಪಕ್ಷದಲ್ಲಿನ ಹಿರಿಯರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ರಾಜ್ಯದ ಜನ ನೋಡಿದ್ದಾರೆ. ಆಡ್ವಾಣಿ, ಜೋಷಿ, ಯಶವಂತ್ ಸಿನ್ಹಾ ಇವರನ್ನೆಲ್ಲ ಬಳಸಿಕೊಂಡು ಡಸ್ಟ್ ಬಿನ್‌ನಲ್ಲಿ ಹಾಕಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ನವರಿಗೆ ಬಿಜೆಪಿಯವರು ಏನ್ ಮಾಡಿದ್ದಾರೆ ಅನ್ನೋದನ್ನ ಜನರೇ ಹೇಳಬೇಕು ಎಂದು ಈಶ್ವರ ಖಂಡ್ರೆ ಟಾಂಗ್ ಕೊಟ್ಟರು.
ಪರಿಸರ ಉಳಿದರೆ ಮಾನವನ ಉಳಿವು : ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಉತ್ತಮ ವಾತಾವರಣವಿದ್ದರೆ ನಾವು ಬದುಕಲು ಸಾಧ್ಯ. ಮನುಷ್ಯನ ಬದುಕಿಗೆ ಗಿಡಮರಗಳು, ಪ್ರಕೃತಿ ಬೇಕೇ ಹೊರತು, ಪ್ರಕೃತಿಗೆ ಮನುಷ್ಯ ಬೇಕಾಗಿಲ್ಲ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು. ಮನುಷ್ಯ ಆರೋಗ್ಯಪೂರ್ಣವಾಗಿ ಬದುಕಲು ಉತ್ತಮ ಪರಿಸರದ ಅಗತ್ಯವಿದೆ ಎಂದರು. ಯುವಕರು ಸಮಾಜದ ಸಂಪತ್ತು. ವೀರಶೈವ ಸಮಾಜದ ಯುವ ಸಂಪತ್ತು ರಚನಾತ್ಮಕವಾದ, ಸಾಮಾಜಿಕವಾದಂತಹ ಕಾರ್ಯ ಮಾಡುತ್ತಿರುವುದು ಮಾದರಿ. ಸಾಮಾಜಿಕ ಕಾರ್ಯದ ಜತೆಗೆ ಧಾರ್ಮಿಕವಾಗಿಯೂ ಧಾರ್ಮಿಕ ಆಚರಣೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಧರ್ಮದ ಅಂತಃಶಕ್ತಿ ಹೆಚ್ಚಿಸಿಕೊಳ್ಳಬೇಕು. ಬಾಹ್ಯವಾಗಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಸೇವಾ ಕಾರ್ಯಗಳನ್ನು ವಿಸ್ತರಿಸಬೇಕು ಎಂದು ತಿಳಿಸಿದರು. ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ, ತುಮಕೂರು ತಾಪಂ ಮಾಜಿ ಸದಸ್ಯ ಎಂ.ಬಿ.ಕುಮಾರ್, ಸಾಗರನಹಳ್ಳಿ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.
ಆಹಾರ, ಗಾಳಿ, ಕುಡಿಯುವ ನೀರು ಮಲಿನಗೊಂಡಿದೆ. ವಾಹನಗಳ, ಕಾರ್ಖಾನೆಗಳ ಮಾಲಿನ್ಯಗಳಿಂದ ಇಡೀ ಮನುಕುಲದ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ಇದೆಲ್ಲದಕ್ಕೂ ಪರಿಸರ ನಾಶವಾಗುತ್ತಿರುವುದೇ ಕಾರಣ. ಕರೊನಾ ಸಂಕಷ್ಟದಲ್ಲಿ ಆಮ್ಲಜನಕ ಕೊರತೆಯಿಂದ ಹಲವು ಮಂದಿ ಪ್ರಾಣತೆತ್ತರು. ಈ ಹಿನ್ನೆಲೆಯಲ್ಲಿ ಸಸಿಗಳನ್ನು ಹೆಚ್ಚೆಚ್ಚು ನೆಡುವಂತಹ, ದಟ್ಟ ಅರಣ್ಯ ಬೆಳೆಸುವಂತಹ, ವನ್ಯ ಸಂಪತ್ತು ಸಂರಕ್ಷಣೆ ಮಾಡುವಂತಹದ್ದು ಪ್ರತಿಯೊಬ್ಬರ ಆದು ಕರ್ತವ್ಯವಾಗಬೇಕು. ಈಶ್ವರ ಖಂಡ್ರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಿದ್ಧಗಂಗಾ ಕ್ಷೇತ್ರದಲ್ಲಿ 5000 ಗಿಡಗಳನ್ನು ನೆಡುವ ಸಿದ್ಧಗಂಗಾ ಅರಣ್ಯ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗಿಡಗಳ ಪೋಷಣೆ, ಪಾಲನೆಯನ್ನು ರಾಜ್ಯ ಘಟಕದಿಂದ ನಿರ್ವಹಣೆ ಮಾಡಲಾಗುವುದು. ಮನೋಹರ ಅಬ್ಬಿಗೆರೆ ರಾಜ್ಯಾಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ ಯುವಘಟಕ