ತುಮಕೂರು : ಭಾರತೀಯ ಜೀವನದಲ್ಲಿ ರೈಲ್ವೆ ಮತ್ತು ಅಂಚೆ ಇಲಾಖೆ ಹಾಸುಹೊಕಕಾಗಿದ್ದು, ಜವಾಬ್ದಾರಿ ಹಾಗೂ ನಂಬಿಕೆ ಕಾರಣದಿಂದಲೇ ಎಲ್ಲರೊಂದಿಗೆ ಭಾವನಾತ್ಮಕ ನಂಟು ಹೊಂದಿವೆ ಎಂದು ಸಿದ್ಧಗಂಗಾ ಮಠಾಧೀಶ ಶ್ರೀಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಸಿದ್ಧಗಂಗಾ ಮಠದಲ್ಲಿ ಭಾನುವಾರ ನ್ಯಾಷನಲ್ ಅಸೋಸಿಯೇಷನ್ ಆಫ್ ಪೋಸ್ಟಲ್ ಎಂಪ್ಲಾಯೀಸ್ ಗ್ರೂಪ್ ಸಿ, ನ್ಯಾಷನಲ್ ಯೂನಿಯನ್ ಆಫ್ ಎಂಪ್ಲಾಯೀಸ್ ಪೋಸ್ಟ್ ಮನ್ ಆ್ಯಂಡ್ ಎಂಟಿಎಸ್, ನ್ಯಾಷನಲ್ ಯೂನಿಯನ್ ಆಫ್ ಗ್ರಾಮೀಣ್ ದಕ್ ಸೇವಕ್ ಕರ್ನಾಟಕ ವೃತ್ತದ ವತಿಯಿಂದ ಹಮ್ಮಿಕೊಂಡಿದ್ದ 25ನೇ ಜಂಟಿ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ಒದಗಿಸುವ ಅವಕಾಶ ಇರುವುದು ಅಂಚೆ ಇಲಾಖೆಗೆ ಮಾತ್ರ, ಬ್ರಿಟಿಷರು ದೇಶ ಬಿಟ್ಟು ಹೋದ ನಂತರವೂ ದೇಶದ ಅಗತ್ಯತೆ ಪೂರೈಸುತ್ತಿರುವ ಅಂಚೆ ಇಲಾಖೆ ಸೇವೆ ಸ್ಮರಣೀಯ ಎಂದರು.
ಪ್ರಧಾನಿ ನರೇಂದ್ರಮೋದಿ ಅಂಚೆ ಇಲಾಖೆಗೆ ಬ್ಯಾಂಕ್ ಸೇರಿ ಇನ್ನಿತರ ಸೇವೆ ಸೇರಿಸುವ ಮೂಲಕ ಇಲಾಖೆ ಉನ್ನತೀಕರಿಸಿದರು, ಕರೊನಾ ಸಂದರ್ಭದಲ್ಲಿ ಪ್ರಾಣ ಲೆಕ್ಕಿಸದೇ ಸೇವೆಯನ್ನು ಸಲ್ಲಿಸಿದ ಕೀರ್ತಿ ಅಂಚೆ ಇಲಾಖೆಯದ್ದು ಎಂದರು.
ಅಂಚೆ ಇಲಾಖೆಯಲ್ಲಿ ದೊಡ್ಡ ಸಂಘಟನೆ ಇದೆ, ತಮ್ಮ ಸಮಸ್ಯೆಗಳನ್ನು ಚರ್ಚಿಸಿ ಮೇಲಿನ ಅಧಿಕಾರಿಗಳಿಗೆ ತಲುಪಿಸಲಿ, ಉನ್ನತ ಅಧಿಕಾರಿಗಳು ಸಂಘಟನೆಯ ಹಿತ ಕಾಯುವಂತಾಗಲಿ, ಕೇಂದ್ರ ಸರ್ಕಾರ ಕೂಡ ಅಂಚೆ ಇಲಾಖೆ ಬೆನ್ನಿಗೆ ನಿಂತಿದ್ದು, ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸಿ ದೇಶಕ್ಕೆ ಹೆಸರು ತರಲಿ ಎಂದರು.
ಕಾರ್ಪೋರೇಟ್ ಹಿತಕಾಯ್ದ ಸರ್ಕಾರ : ಕರೊನಾ ಸಂದರ್ಭದಲ್ಲಿ ಎಲ್ಲ ವೃತ್ತಗಳು ಸ್ತಬ್ಧವಾದರೆ ಕರ್ನಾಟಕ ವೃತ್ತ ಮಾತ್ರ ಉತ್ತಮವಾಗಿ ಕೆಲಸ ಮಾಡಲು ಮುಖ್ಯ ಅಂಚೆ ಮಾಸ್ಟರ್ ಶಾರದಾ ಸಂಪತ್ ಅವರೇ ಕಾರಣ, ಎಲ್ಲ ನೌಕರರ ಹಿತರಕ್ಷಣೆಗೆ ಕ್ರಮವಹಿಸಿ ಕಾರ್ಯನಿರ್ವಹಿಸುವಂತೆ ಮಾಡಿದರು ಎಂದು ಎಫ್‌ಎನ್‌ಪಿಒ ಮಾಜಿ ಕಾರ್ಯದರ್ಶಿ ಡಿ.ತ್ಯಾಗರಾಜನ್
ಶ್ಲಾಘಿಸಿದರು. ಪ್ರಸ್ತುತ ಇರುವ ಕೇಂದ್ರ ಸರ್ಕಾರ ಕಾರ್ಮಿಕರ ಪರವಾಗಿಲ್ಲ ಎನ್ನುವುದು ಗೊತ್ತಿರುವ ವಿಚಾರ, ಕರೊನಾ ಸಂದರ್ಭದಲ್ಲಿಯೂ ಕಾರ್ಪೋರೇಟ್ ಹಿತಕಾಯಿತು. ಹಣಕಾಸು ಸಚಿವೆ ಇಲಾಖೆಯ ನಿರ್ವಹಣೆಯನ್ನು ಇಲಾಖೆಯೇ ನೋಡಿಕೊಳ್ಳುವಂತೆ ಸೂಚಿಸುತ್ತಾರೆ, ಅದು ಸಾಧ್ಯವೇ ಎಂದು ಪ್ರಶ್ನಿಸಿದರು.
ಆರ್‌ಬಿಐ ಮಾರ್ಗಸೂಚಿಗಳನ್ವಯ ಈಗ ಬ್ಯಾಂಕಿಂಗ್ ನಡೆಯುತ್ತಿದೆ. 2027ರಲ್ಲಿ ಪೋಸ್ಟ್ ಆಫೀಸ್‌ನ ಮುಖ್ಯ ಕೆಲಸ ಏನಾಗಲಿದೆಯೊ? ಅಂಚೆ ಇಲಾಖೆಯ ಸೇವೆಗಳ ಬಗ್ಗೆ ವಿದೇಶಗಳಲ್ಲಿ ಚಿಂತನೆ ಇದೆ, ಮೇಲ್ ಮೂಲಕ ಮಾಹಿತಿ ರವಾನೆಯ ಆತಂಕವಿದೆ ಆದರೆ ಭಾರತದಲ್ಲಿ ಅಂಚೆ ಇಲಾಖೆಗೆ ಸೇವೆಗಳ ಹೊರೆ ಹಾಕಲಾಗುತ್ತಿದ್ದು, ಮುಂದೆ ಇದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದರು.