ಮಂಗಳೂರು: ಸ್ವಾಮಿ ವಿವೇಕಾನಂದರು ಸಕಾರಾತ್ಮಕತೆಗಳ ಅಪರಿಮಿತ ಗಣಿ. ತ್ಯಾಗ ಮತ್ತು ಸೇವೆ ಈ ದೇಶದ ಅವಳಿ ಆದರ್ಶಗಳು. ಯುವಕರು ವಿವೇಕಾನಂದರ ಸಂದೇಶ ಪಾಲಿಸಬೇಕಿದೆ ಎಂದು ಮಣಿಪಾಲ್ ಅಕಾಡೆಮಿ ಆಫ್ ಹಯರ್ ಎಜುಕೇಶನ್ ಸಂಸ್ಥೆಯ ಪ್ರೊ.ನಂದನ್ ಪ್ರಭು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ 33ನೇ ಉಪನ್ಯಾಸದಲ್ಲಿ ಯುವಜನತೆ ಮತ್ತು ರಾಷ್ಟ್ರ: ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ಸಂದೇಶಗಳ ಮರುಶೋಧನೆ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಯುವಜನತೆ ಭಾರತದ ಭವಿಷ್ಯ ರೂಪಿಸುವವರು. ಆಧುನಿಕ ಸಮಾಜದ ಸಮಸ್ಯೆಗಳಿಗೆ ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಪರಿಹಾರವಿದೆ. ಅವರ ಜೀವನ ಸಂದೇಶಗಳ ಅಧ್ಯಯನವನ್ನು ನಡೆಸಿ ಸಮಾಜಮುಖಿ ಜೀವನವನ್ನು ನಡೆಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಹೆಚ್ ಹೇಳಿದರು.ರಾಮಕೃಷ್ಣ ಮಿಷನ್ ನ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಕ್ಯಾಲ್ ಡಿ ಮೇಲ್ಲೋ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಬೆಲ್ಲಾಳ ಗೋಪಿನಾಥ ರಾವ್, ಕಾಲೇಜಿನ ಎನ್.ಎಸ್.ಎಸ್. ಘಟಕದ ಸಂಯೋಜಕರಾದ ಡಾ. ನಾರಾಯಣಸ್ವಾಮಿ ಮೊದಲಾದವರಿದ್ದರು.