ಜಿಲ್ಲೆ

ಯುವಕರಿಗೆ ಮಾದರಿ ಸ್ವಾಮಿ ವಿವೇಕಾನಂದ: ಅಲಯನ್ಸ್ ಕ್ಲಬ್ ಪ್ರಾಂತಪಾಲ ಕೆ.ಟಿ.ಹನುಮಂತು ಬಣ್ಣನೆ

ಶ್ರೀರಂಗಪಟ್ಟಣ: ಯುವ ಸಮೂಹಕ್ಕೆ ಸ್ಪೂರ್ತಿ ನೀಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ದೇಶದ ಪ್ರತಿಯೊಬ್ಬರಿಗೂ ಮಾದರಿ ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್‌ನ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.

ತಾಲೂಕಿನ ಅರಕೆರೆ ಗ್ರಾಮದ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಸರ್ವೋದಯ ಅಲಯನ್ಸ್ ಸಂಸ್ಥೆ ಹಾಗೂ ಸನ್ಮತಿ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಅರಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೈರೇಶ್ ಅವರಿಗೆ ವಿವೇಕಾನಂದ ಸದ್ಭಾವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸ್ವಾಮಿ ವಿವೇಕಾನಂದ ಅವರು ಜಗತ್ತಿಗೆ ವಿವೇಕ ಕೊಟ್ಟವರು. ಹಾಗೂ ಇಡೀ ವಿಶ್ವಕ್ಕೆ ಜ್ಞಾನದ ಬೆಳಕನ್ನು ನೀಡಿದವರು. ಮಾತ್ರವಲ್ಲದೆ ಭಾರತೀಯ ಆಧ್ಯಾತ್ಮಿಕ ಶಕ್ತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ಭಾರತಾಂಬೆಯ ಹೆಮ್ಮೆಯ ಪುತ್ರ. ನಾವು ಅವರ ಜಯಂತಿಯನ್ನು ಆಚರಣೆ ಮಾಡುವುದಲ್ಲ, ಬದಲಿಗೆ ವಿಚಾರಧಾರೆಗಳನ್ನು ಅನುಸರಣೆಗೆ ತಂದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗಲೇ ಅವರ ಜಯಂತ್ಯುತ್ಸವ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಬೈರೇಶ್, ನಾನು ಜೀವನದಲ್ಲಿ ಬಹಳ ಬಡತನದಿಂದ ಬಂದವನು. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸರ್ಕಾರಿ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ವಿದ್ಯಾರ್ಥಿಗಳು ಕೂಡ ಜೀವನದಲ್ಲಿ ಕಷ್ಟಪಟ್ಟು ವಿದ್ಯಾರ್ಜನೆ ಮಾಡಿ ಮೇಲೆ ಬರಬೇಕೆಂದು ಸಲಹೆ ನೀಡಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ನ ಮುಖ್ಯಶಿಕ್ಷಕ ಬಿ.ವಿ.ಹರೀಶ್, ಅಲಯನ್ಸ್ ಸಂಸ್ಥೆಯ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಪ್ರೊ.ಡೇವಿಡ್, ಸರ್ವೋದಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಅನಿಲ್ಬಾಬು, ಸನ್ಮತಿ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ವಿ.ಮಹಾಲಕ್ಷ್ಮೀ, ಜಿಲ್ಲಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಸೋಮಶೇಖರ್, ಖಜಾಂಚಿ ಚನ್ನೇಗೌಡ ಇತರರಿದ್ದರು.