ಜಿಲ್ಲೆ

ಎಂದೆಂದಿಗೂ ವಿವೇಕಾನಂದರ ತತ್ವ ಚಿರಸ್ಥಾಯಿ: ಡಿಸಿ ಡಾ.ಎಚ್.ಎನ್. ಗೋಪಾಲಕೃಷ್ಣ ಬಣ್ಣನೆ

reportermys

ಮಂಡ್ಯ: ಸ್ವಾಮಿ ವಿವೇಕಾನಂದ ಅವರು ಜೀವಿಸಿದ ಅವಧಿ ಬಹಳ ಕಡಿಮೆ. ಆದರೂ ಅವರ ತತ್ವಗಳು ಈ ಭೂಮಂಡಲ ಇರುವವರೆಗೂ ಚಿರಸ್ಥಾಯಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ನುಡಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಎನ್‌ಎಸ್‌ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದರ ತತ್ವಗಳು ಯುವಜನರ ಮನಸ್ಸಿಗೆ ನಾಟಬೇಕು. ಇಂದಿನ ಯುವಕರು ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ರಾಜ್ಯ, ರಾಷ್ಟ್ರಕ್ಕೆ ಕೀರ್ತಿ ತಂದುಕೊಡಬೇಕು. ಇಂದಿನ ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಸ್ವಯಂ ಉದ್ಯೋಗ ಮಾಡಬೇಕು. ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು. ಮಾದಕ ವಸ್ತುಗಳಿಂದ ದೂರವಿದ್ದು ಪ್ರಜ್ಞಾವಂತ ನಾಗರಿಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

15 ರಿಂದ 29 ವರ್ಷದೊಳಗಿನ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಮಾರ್ಗದರ್ಶನ ನೀಡಲು ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದ ಯುವ ಶಕ್ತಿ ಎಂಬ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಕೌಶಲಾಭಿವೃದ್ಧಿ, ಆರ್ಥಿಕ ಸಹಾಯ ಲಭ್ಯವಿದ್ದು, ಇದರ ಸದುಪಯೋಗಪಡಿಸಿಕೊಳ್ಳಿ. ರಾಷ್ಟ್ರೀಯ ಯುವ ದಿನದ ಅಂಗವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ರಾಷ್ಟ್ರೀಯ ಯುವಜನೋತ್ಸವ ಕರ್ನಾಟಕದಲ್ಲಿ ನಡೆಯುತ್ತಿರುವುದು ಬಹಳ ಸಂತೋಷದ ವಿಷಯ. ಈ ಹಿಂದೆ ನಾನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತನಾಗಿದ್ದಾಗ ಯುವಜನೋತ್ಸವ ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿತ್ತು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್, ನೆಹರು ಯುವ ಕೇಂದ್ರದ ಚಿನ್ನಗಿರಿಗೌಡ, ಅರುಣಕುಮಾರಿ, ಅನುಪಮಾ ಇತರರಿದ್ದರು.