ಬೇಲೂರಿನಲ್ಲಿ ಆಯೋಜಿಸಿದ್ದ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಕೆ.ಸುರೇಶ್, ಅಭಿಷೇಕ ಚವರೆ, ಬಿ.ತಿಪ್ಪೇರುದ್ರಸ್ವಾಮಿ, ಇಮ್ರಾನ್ ಅಹ್ಮದ್ ಬೇಗ್, ಹರೀಶ್, ಪ್ರಜ್ವಲ್, ಮಂಜುನಾಥ್ ಇದ್ದರು. 
ಜಿಲ್ಲೆ

ಯುವ ಸಮೂಹಕ್ಕೆ ಸ್ವಾಮಿ ವಿವೇಕಾನಂದ ಜೀವ ಸಂಜೀವಿನಿ

ಬೇಲೂರು: ಶಕ್ತಿ, ಧೈರ್ಯ, ನಿಸ್ವಾರ್ಥ ಸೇವೆ, ಪರೋಪಕಾರ ಮನೋಭಾವನೆ ಮತ್ತು ಸಂಸ್ಕೃತಿಯನ್ನು ಯುವ ಸಮೂಹಕ್ಕೆ ತಿಳಿಪಡಿಸುವ ಮೂಲಕ ಸ್ವಾಮಿ ವಿವೇಕಾನಂದರು ಜೀವ ಸಂಜೀವಿನಿಯಾಗಿದ್ದಾರೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ವಸತಿ ನಿಲಯದಲ್ಲಿ ಮೈ ಭಾರತ್ ನೆಹರು ಯುವ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ (ಹಾಸನ-ಕಾರವಾರ)ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಯಾ ಜಿಲ್ಲೆಯಲ್ಲಿನ ಸಂಸ್ಕೃತಿ ಹಾಗೂ ಪರಂಪರೆ ಇಂದಿನ ಯುವ ಸಮುದಾಯಕ್ಕೆ ತಿಳಿಯಬೇಕೆಂದು ಕೇಂದ್ರ ಸರ್ಕಾರ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ನಡೆಸುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದರು.

ಕಾರವಾರ ಮತ್ತು ಹಾಸನ ಜಿಲ್ಲೆಯ ವೈಶಿಷ್ಟ್ಯತೆ, ಸಂಸ್ಕೃತಿ ವಿಭಿನ್ನವಾಗಿದೆ. ಹಾಸನ ಜಿಲ್ಲೆ ಕಲೆ, ಸಾಹಿತ್ಯ, ನೃತ್ಯ, ವಾಸ್ತುಶಿಲ್ಪದ ಜತೆಗೆ ರಾಜಕೀಯ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದೆ. ಹೆಚ್ಚು ಕನ್ನಡ ಮಾತನಾಡುವ ಹಾಸನದಲ್ಲಿ ಜಾನಪದದ ಶ್ರೀಮಂತಿಕೆ ಇದೆ. ಬೇಲೂರು-ಹಳೇಬೀಡು-ಶ್ರವಣಬೆಳಗೊಳದಂತಹ ಕ್ಷೇತ್ರಗಳು ಜಿಲ್ಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗೊಳಿಸಿವೆ.

ರಾಜಕೀಯವಾಗಿಯೂ ತನ್ನದೇ ಆದ ಸ್ಥಾನ ಹೊಂದಿದೆ. ಈ ಜಿಲ್ಲೆಗೆ ಕಾರವಾರದಿಂದ ಬಂದಿರುವ ಯುವ ತಂಡ ಐದು ದಿನಗಳ ಕಾಲ ಇಲ್ಲಿನ ಪರಿಸರ, ಆಚಾರ-ವಿಚಾರ ಸಂಸ್ಕೃತಿ ಸಂಪ್ರದಾಯ, ಶಿಲ್ಪಕಲೆ, ಕೃಷಿ ನೀರಾವರಿ ಬಗ್ಗೆ ಹೆಚ್ಚಿನದಾಗಿ ತಿಳಿದು ಕೊಳ್ಳಬೇಕಿದೆ. ಜತೆಗೆ ಯುವಕರು ದೇಶದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು.

ಹಾಸನ ನೆಹರು ಯುವ ಕೇಂದ್ರದ ಅಧಿಕಾರಿ ಅಭಿಷೇಕ ಚವರೆ ಮಾತನಾಡಿ, ಯುವ ಜನಾಂಗ ದೇಶದ ಅಮೂಲ್ಯ ಸಂಪತ್ತು.ಅವರಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಮೂಲಕ ದೇಶ ಕಟ್ಟಲು ಪ್ರೇರೇಪಿಸಬೇಕೆಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಯೋಜನೆಯಡಿ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮವನ್ನು ಬೇಲೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹಾಸನ ಮತ್ತು ಕಾರವಾರ ಎರಡು ಜಿಲ್ಲೆಗಳ ವೈಶಿಷ್ಟ್ಯವನ್ನು ಸಾರುವ ನಿಟ್ಟಿನಲ್ಲಿ ಯುವಕರಿಗೆ ತಿಳಿಸಲಾಗುತ್ತದೆ ಎಂದರು.

ಚಿಕ್ಕಮಗಳೂರು ನಿವೃತ್ತ ಪ್ರಾಧ್ಯಾಪಕ ಬಿ.ತಿಪ್ಪೇರುದ್ರಸ್ವಾಮಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಇಮ್ರಾನ್ ಅಹ್ಮದ್ ಬೇಗ್, ಯುವಕರಾದ ಹರೀಶ್, ಪ್ರಜ್ವಲ್, ಮಂಜುನಾಥ್, ಪುನೀತ್ ಸೇರಿದಂತೆ ಇತರರಿದ್ದರು.