ಬೀಳಗಿ: ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯು ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲೇ ತನ್ನದೇ ಆದ ಕೊಡುಗೆ ನೀಡಿ ವಿದ್ಯಾರ್ಥಿಗಳ ಪಾಲಿಗೆ ಜ್ಞಾನದ ದೇಗುಲವಾಗಿ ಮಾರ್ಪಟ್ಟಿದೆ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಐಐಟಿಯಲ್ಲಿ 5,252 ರಾಂಕ್ ಪಡೆದ ಯಲಗೂರೇಶ ದ್ಯಾಮಣ್ಣ ಗಂಟಿ ಅವರಿಗೆ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ತೊಡಗಿರುವ ಈ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ ಈ ಭಾಗದ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ನರ್ಸರಿಯಿಂದ ಪಿಜಿಯವರಿಗೆ ಒಂದೇ ಸೂರಿನಲ್ಲಿ ಮೌಲ್ಯಯುತ ಶಿಕ್ಷಣ ದೊರೆಯುಂತೆ ಮಾಡಿದ್ದಾರೆ. ಈ ಭಾಗದ ಮಾಜಿ ಸಚಿವ ಎಸ್.ಆರ್. ಪಾಟೀಲ ತಮ್ಮ ಸ್ವ ಗ್ರಾಮದಲ್ಲಿ ಬೃಹದಾಕಾರದ ಆಸ್ಪತ್ರೆ ತೆರೆದು ಈ ಭಾಗದವರಿಗೆ ಆರೋಗ್ಯ ಸಂಜೀವಿನಿ ಆಗಿದ್ದಾರೆ. ಇಲ್ಲಿನ ಮಕ್ಕಳು ಶಿಕ್ಷಣ ಪಡೆಯಲು ವೈದ್ಯಕೀಯ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದಾರೆ. ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ. ಎನ್. ಪಾಟೀಲ, ನಿರ್ದೇಶಕ ರವಿ ಪಾಟೀಲ, ಪ್ರಾಚಾರ್ಯ ಐ.ಬಿ. ಪೂಜಾರಿ, ಜಿ. ಆರ್. ಪಾಟೀಲ, ಉಪನ್ಯಾಸಕಿ ಮಲ್ಲಮ್ಮ ವೆಂಕಟಾಪುರ ಇದ್ದರು.