ಬೆಂಗಳೂರು: ರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದ ಪೂಜ್ಯ ಸ್ವಾಮಿ ಹರ್ಷಾನಂದಜೀ ಮಹಾರಾಜ್ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 91 ವರ್ಷ ವಯಸ್ಸಾಗಿದ್ದ ಅವರು ಮಧ್ಯಾಹ್ನ 1.05ಕ್ಕೆ ಕೊನೆಯುಸಿರೆಳೆದಿದ್ದಾರೆ.
ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಎತ್ತಿ ಹಿಡಿದ ವಿದ್ವಾಂಸರಾಗಿದ್ದ ಸ್ವಾಮಿ ಹರ್ಷಾನಂದಜೀ ಉತ್ತಮ ವಾಗ್ಮಿಗಳಾಗಿದ್ದರು. ರಾಮಕೃಷ್ಣ ಮಠದ ಅತ್ಯಂತ ಹಿರಿಯ ಸನ್ಯಾಸಿಯಾಗಿದ್ದರು. 1989ರಲ್ಲಿ ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ರಾಮಕೃಷ್ಣ ಮಠದ ಆರನೇ ಅಧ್ಯಕ್ಷರಾದ ಸ್ವಾಮಿ ವಿರಜಾನಂದರಿಂದ ಮಂತ್ರದೀಕ್ಷೆಯನ್ನು ಪಡೆದಿದ್ದರು. 1962ರಲ್ಲಿ ಮಠದ 8ನೇ ಅಧ್ಯಕ್ಷರಾಗಿದ್ದ ಸ್ವಾಮಿ ವಿಶುದ್ಧಾನಂದರಲ್ಲಿ ಸನ್ಯಾಸಿ ದೀಕ್ಷೆಯನ್ನು ಸ್ವೀಕರಿಸಿ, ಮಂಗಳೂರು, ಮೈಸೂರು, ಬೇಲೂರು ಮಠ ಮತ್ತು ಅಲ್ಲಹಾಬಾದ್ ರಾಮಕೃಷ್ಣ ಮಠಗಳಲ್ಲೂ ಕಾರ್ಯ ನಿರ್ವಹಿಸಿದ್ದರು.
ನಾಳೆ ಮಧ್ಯಾಹ್ನ 3 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಇಂದು ಸಂಜೆ ಮತ್ತು ನಾಳೆ ಬೆಳಿಗ್ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಅನೇಕರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಭಗವಂತನು ಅವರಿಗೆ ಮೋಕ್ಷವನ್ನು ಕರುಣಿಸಲಿ. ಅವರ ಅನುಯಾಯಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)