ಬೆಂಗಳೂರು: ಸ್ವದೇಶಿ ಜಾಗರಣ ಮಂಚ್ (ಕರ್ನಾಟಕ), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಏ. 6ರಿಂದ 10ರವರೆಗೆ ‘ಸ್ವದೇಶಿ ಮೇಳ’ ಆಯೋಜಿಸಲಾಗಿದೆ. ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ನಡೆಯಲಿರುವ ಮೇಳದ ಪ್ರಾಯೋಜಕತ್ವವನ್ನು ವಿಜಯವಾಣಿ ವಹಿಸಿದೆ. 6ರಂದು ಸಂಜೆ 5.30ಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸೆಲ್ಕೋ ಕಂಪನಿಯ ಸಂಸ್ಥಾಪಕ ಡಾ. ಹರೀಶ್ ಹಂದೆ, ಶಾಸಕಿ ಸೌಮ್ಯಾ ರೆಡ್ಡಿ ಭಾಗವಹಿಸಲಿದ್ದಾರೆ ಎಂದು ಮೇಳದ ಸಂಚಾಲಕ ಪ್ರಕಾಶ್ ಬೆಳವಾಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಳೆದ ಎರಡು ದಶಕದಿಂದ ಸ್ವದೇಶಿ ಮೇಳವನ್ನು ಆಯೋಜಿಸಲಾಗುತ್ತಿದೆ. ದೇಸಿ ಉತ್ಪನ್ನಗಳನ್ನು ಜನರಿಗೆ ತಲುಪಿಸುವುದು ಹಾಗೂ ಈ ಉತ್ಪಾದಕ ಕಂಪನಿಗಳಿಗೆ ಮಾರುಕಟ್ಟೆಯನ್ನು ಒದಗಿಸುವುದು ಇದರ ಮುಖ್ಯ ಉದ್ದೇಶದ. ಮೇಳದಲ್ಲಿ 220 ಮಳಿಗೆಗಳಿರಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಮಾರಾಟಗಾರರು ಭಾಗವಹಿಸಲಿದ್ದಾರೆ. ಇಲ್ಲಿ ವಿದೇಶಿ ಉತ್ಪನ್ನಗಳಿಗೆ ಅವಕಾಶವಿಲ್ಲ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.
ಸ್ವದೇಶಿ ಜಾಗರಣ ಮಂಚ್ (ಕರ್ನಾಟಕ) ಕ್ಷೇತ್ರೀಯ ಸಂಘಟಕ ಜಗದೀಶ್ ಮಾತನಾಡಿ, ತಂತ್ರಜ್ಞಾನ, ದೇಸಿ ಆಹಾರ ಉತ್ಪನ್ನಗಳು, ಆಯುರ್ವೆದ ಉತ್ಪನ್ನಗಳು ಸೇರಿ ಹಲವಾರು ವಿವಿಧ ಮಳಿಗೆಗಳು ಇರಲಿವೆ. 1.5 ಲಕ್ಷ ಗ್ರಾಹಕರ ನಿರೀಕ್ಷೆಯಲ್ಲಿದ್ದೇವೆ. ಗಾಣದ ಎಣ್ಣೆ ತಯಾರಿಸುವ ಕೇಂದ್ರ ಇರಲಿದ್ದು, ಗ್ರಾಹಕರು ನೇರವಾಗಿ ಗಾಣದ ಮೂಲಕವೇ ಎಣ್ಣೆ ಪಡೆಯಬಹುದು. ‘ತಾರಸಿ ತೋಟ ತರಬೇತಿ’, ‘ಆಯುರ್ವೆದ ಶಿಬಿರ’, ‘ಇ-ಕಾಮರ್ಸ್’, ‘ನಿತ್ಯ ಬಳಕೆ ವಸ್ತು ತಯಾರಿಕಾ ಶಿಬಿರ’, ‘ಪಂಚಗವ್ಯ ಚಿಕಿತ್ಸಾ ಶಿಬಿರ’, ‘ನಿತ್ಯ ಜೀವನದಲ್ಲಿ ಸ್ವದೇಶಿ’, ‘ಸ್ವದೇಶಿ ವಸ್ತು ಭಂಡಾರ ತರಬೇತಿ’ ಆಯೋಜಿಸಲಾಗಿದೆ. ಈಗಾಗಲೇ ಆಸಕ್ತರು ನೋಂದಾಯಿಸಿಕೊಂಡಿದ್ದಾರೆ ಎಂದರು. ಮೇಳದ ಸಂಘಟಕ ಬಿ.ಎಚ್. ರಘುರಾಮ್ ಕಿಶೋರ್ ಪಟವರ್ಧನ್ ಇತರರಿದ್ದರು.
ಅದೃಷ್ಟಶಾಲಿಗಳಿಗೆ ಸೀರೆ ಉಡುಗೊರೆ: ಸೌಭಾಗ್ಯವತಿ ಉಡುಗೊರೆ ಎಂಬ ವಿಶೇಷ ಕಾರ್ಯಕ್ರಮ ರೂಪಿಸಿದ್ದು, ಸೀರೆ ತೊಟ್ಟು ಮೇಳಕ್ಕೆ ಬರುವ ಮಹಿಳೆಯರಿಗೆ ‘ಲಕ್ಕಿ ಡ್ರಾ’ ಮೂಲಕ ಆಯ್ಕೆ ಮಾಡಿ ಉಚಿತ ಸೀರೆ ನೀಡಲಾಗುತ್ತದೆ. ಕುಶಲಕರ್ವಿುಗಳು ಸ್ಥಳದಲ್ಲೇ ಚನ್ನಪಟ್ಟಣದ ಗೊಂಬೆ ತಯಾರಿಸಿ ಬಣ್ಣ ತುಂಬಿ ನೀಡಲಿದ್ದಾರೆ. ಮಕ್ಕಳಿಗೆ ಲಗೋರಿ, ಬುಗುರಿ ಈ ರೀತಿಯ ಹಲವು ದೇಸಿ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಬೆಂಗಳೂರು: ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಎಂಎಸ್ಎಂಇ) ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಬ್ಯಾಂಕ್ಗಳ ಸಣ್ಣ ಉದ್ದಿಮೆದಾರರಿಗೆ ಸಾಲ ನೀಡಬೇಕು ಎಂಬುದು ಸ್ವದೇಶಿ ಜಾಗರಣ ಮಂಚ್ ಕರ್ನಾಟಕದ ಪ್ರಚಾರ ವಿಭಾಗದ ಮುಖ್ಯಸ್ಥ ಕಿಶೋರ್ ಪಟವರ್ಧನ್ ಅಭಿಮತ.
ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದರ ಪ್ರಮಾಣ ಕಡಿಮೆ ಮಾಡಬೇಕಾದಲ್ಲಿ, ಎಂಎಸ್ಎಂಇ ಉದ್ಯಮ, ಕೃಷಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡಬೇಕು. ಬ್ಯಾಂಕ್ಗಳು ಸಹ ಒಬ್ಬ ವ್ಯಕ್ತಿಗೆ ನೂರಾರು ಕೋಟಿ ರೂ. ನೀಡುವ ಬದಲು ಹತ್ತಾರು ಜನರಿಗೆ ಇದನ್ನು ಹಂಚುವಂತಾಗಬೇಕು ಎಂದು ಹೇಳಿದ್ದಾರೆ.
ಜಗತ್ತಿನ ಶೇ.17.7 ಜನಸಂಖ್ಯೆ ಭಾರತದಲ್ಲಿದೆ. ಈ ಪೈಕಿ ಶೇ.35.5 ಜನರು ನಗರಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಉಳಿದ ಶೇ.65.5 ಜನರು ಹಳ್ಳಿಯಲ್ಲಿದ್ದಾರೆ. ದೇಶದಲ್ಲಿ ಸ್ವಾತಂತ್ರ್ಯದ ನಂತರ ಕಾಡುತ್ತಿರುವ ದೊಡ್ಡ ಸಮಸ್ಯೆ ನಿರುದ್ಯೋಗವಾಗಿದೆ.ಸರ್ಕಾರವು ಅಭಿವೃದ್ಧಿಗೆ ಒತ್ತು ನೀಡುವುದು ಸ್ವಾಗತಾರ್ಹ. ಆದರೆ, ಈ ಅಭಿವೃದ್ಧಿ ಪಾಶ್ಚಿಮಾತ್ಯ ರೀತಿಯಲ್ಲಿ ಉದ್ಯೋಗರಹಿತ ಅಭಿವೃದ್ಧಿಯಾಗುತ್ತಿರುವುದು ದೇಶಕ್ಕೆ ಹಾನಿ, ಯುವಜನತೆಗೆ ಮಾರಕ. ಇದರಿಂದ ಆತ್ಮಹತ್ಯೆ, ಅಪರಾಧ ಪ್ರವೃತ್ತಿ ಮನೋಭಾವ ಹೆಚ್ಚಳ, ಮೌಲ್ಯಗಳ ನಾಶ, ಆರ್ಥಿಕ ಅಸಮಾನತೆ ಮತ್ತು ಸಂಪತ್ತಿನ ಕೇಂದ್ರೀಕರಣವಾಗುತ್ತದೆ. ದೇಶದಲ್ಲಿ ಎಐಎಸ್ಎಚ್ಇ ಪ್ರಕಾರ 2021ರಲ್ಲಿ 530 ಲಕ್ಷ ಯುವ ಜನತೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಪಿಎಚ್.ಡಿ. ಮುಗಿಸಿಕೊಂಡರೂ ಉದ್ಯೋಗ ಸಿಗುತ್ತಿಲ್ಲ. ದೇಶದಲ್ಲಿ 35 ಲಕ್ಷ ಪ್ರತಿವರ್ಷ ಉದ್ಯೋಗ ಸೃಷ್ಟಿಯಾಗಲಿದೆ. ಇದರಲ್ಲಿ ಶೇ.30.35 ಕಾಯಂ ಉದ್ಯೋಗವಕಾಶಗಳಾಗಿದ್ದು, ಶೇ.60 ರಿಂದ 65 ತಾತ್ಕಾಲಿಕ ಉದ್ಯೋಗಾವಕಾಶವಾಗಿದೆ ಎಂದು ತಿಳಿಸಿದ್ದಾರೆ.
2022ರಲ್ಲಿ ಶೇ.7.3 ಯುವಜನತೆ ಉದ್ಯೋಗ ಹುಡುಕಾಟದಲ್ಲಿದ್ದಾರೆ. ಪ.ಬಂಗಾಳ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಅತಿಹೆಚ್ಚು ನಿರುದ್ಯೋಗ ಸಮಸ್ಯೆ ಇದೆ. ಕರ್ನಾಟಕ, ಮೇಘಾಲಯ, ಒಡಿಶಾದಲ್ಲಿ ಅತಿಕಡಿಮೆ ಎಂದು ಸಮೀಕ್ಷೆಯೊಂದು ಹೇಳಿದೆ ಎಂದು ಕಿಶೋರ್ ಹೇಳಿದ್ದಾರೆ.
ಹೆಚ್ಚು ಕೆಲಸಗಳನ್ನು ಸೃಷ್ಟಿ ಮಾಡುವ ಕ್ಷೇತ್ರವೆಂದರೆ ಕೃಷಿ, ಎಂಎಸ್ಎಂಇ ಹಾಗೂ ರೀಟೆಲ್ ವಲಯ. 2018ರ ಮಾಹಿತಿ ಪ್ರಕಾರ ಸರ್ಕಾರ ಮತ್ತು ಖಾಸಗಿ ವಲಯಗಳು ಒಟ್ಟಾರೆಯಾಗಿ ಸೃಷ್ಟಿಸಿದ ಉದ್ಯೋಗಾವಕಾಶಗಳು ಶೇ.7.29. ಆದರೆ, ಶೇ.42 ಉದ್ಯೋಗಾವಕಾಶವನ್ನು ಕೃಷಿ ಕ್ಷೇತ್ರವೊಂದೇ ಸೃಷ್ಟಿಸಿದೆ. ಉಳಿದ ಶೇ.34 ಎಂಎಸ್ಎಂಇ, ಶೇ.15.31 ರೀಟೆಲ್ ಮತ್ತು ಸೇವಾ ಕ್ಷೇತ್ರಗಳಲ್ಲಿವೆ. ಸರ್ಕಾರ ಮತ್ತು ಖಾಸಗಿ ವಲಯಕ್ಕಿಂತ ಉಳಿದವು ಹೆಚ್ಚು ಉದ್ಯೋಗ ನೀಡಿವೆ. ಸಾವಯವ ಕೃಷಿ, ಬಹುಬೆಳೆ ಪದ್ಧತಿ, ಆಯಾ ಪ್ರದೇಶಗಳ ವಾತಾವರಣ, ಮಣ್ಣಿನ ಗುಣಕ್ಕೆ ಹೊಂದುವ ಬೆಳೆಗಳ ಬೆಳೆಯುವುದು ಮತ್ತು ಮೌಲ್ಯವರ್ಧನೆ ಮಾಡುವುದು, ಗುಡಿ ಕೈಗಾರಿಕೆ, ಗೋ ಆಧಾರಿತ ಉತ್ಪನ್ನಗಳ ತಯಾರಿಕೆ, ಆಯುರ್ವೆದ ಔಷಧಗಳ ತಯಾರಿ, ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ವಿಪರ್ಯಾಸವೆಂದರೆ, ಸರ್ಕಾರ ಮತ್ತು ಬ್ಯಾಂಕುಗಳು ಶೇ.7.29 ಉದ್ಯೋಗ ಸೃಷ್ಟಿ ಮಾಡುವವರಿಗೆ ಶೇ.92.71 ಸಾಲ ನೀಡಿದರೆ, ಶೇ.92.71 ಉದ್ಯೋಗ ಸೃಷ್ಟಿಮಾಡುವ ಕ್ಷೇತ್ರಗಳಿಗೆ ಕೊಡುವ ಸಾಲದ ಪ್ರಮಾಣ ಶೇಕಡ 7.29 ಮಾತ್ರ. ಇದು ಬದಲಾಗಬೇಕಿದ್ದು, ಆರ್ಥಿಕ ವ್ಯವಸ್ಥೆ ವಿಕೇಂದ್ರೀಕರಣವಾಗಬೇಕು ಎಂದು ಕಿಶೋರ್ ಪಟವರ್ಧನ ಹೇಳುತ್ತಾರೆ.