ಜಿಲ್ಲೆ

ಸ್ವಚ್ಛತೆ ಆಶಯ ಬಲಪಡಿಸಲು ಅಭಿಯಾನ: ಜಿ.ಪಂ ಸಿಇಒ ಕೆ.ಆರ್.ನಂದಿನಿ ಹೇಳಿಕೆ

ಮಂಡ್ಯ: ಜನ ಸಮುದಾಯದಲ್ಲಿ ಸ್ವಚ್ಛತೆಯ ಆಶಯಗಳನ್ನು ಬಲಪಡಿಸಲು ಸ್ವಚ್ಛೋತ್ಸವ ಪಾಕ್ಷಿಕ ಅಭಿಯಾನ ಆಚರಿಸಲಾಗುತ್ತಿದೆ. ಅದರಂತೆ ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
ಸ್ಚಚ್ಛತಾ ಹೀ ಸೇವಾ ಸ್ವಚ್ಛೋತ್ಸವ ಪಾಕ್ಷಿಕ ಆಂದೋಲನಕ್ಕೆ ನಗರದ ಜಿಪಂ‌ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿ ಅಂಗವಾಗಿ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತಾ ಹೀ ಸೇವಾ ಅಥವಾ ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯುಕ್ತ ಅ.2ರವರೆಗೆ ಸ್ವಚ್ಛೋತ್ಸವ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛತಾ ಹೀ ಸೇವಾ ಆಂದೋಲನ ರಾಷ್ಟ್ರ ವ್ಯಾಪಿ ಆಚರಿಸಲಾಗುತ್ತಿದೆ. ವಿಶೇಷ ಆಂದೋಲನದಲ್ಲಿ ಸ್ವಚ್ಛತೆಗಾಗಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕ ಸಹಭಾಗಿತ್ವ ಮತ್ತು ಸಮುದಾಯದ ಭಾಗವಹಿಸುವಿಕೆ ಕೂಡ ಬಹಳ ಮುಖ್ಯ ಎಂದು ತಿಳಿಸಿದರು.
ಜಿಪಂ‌ ಉಪ ಕಾರ್ಯದರ್ಶಿ ಲಕ್ಷ್ಮೀ, ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ಚಂದ್ರ, ಸಹಾಯಕ ಕಾರ್ಯದರ್ಶಿ(ಆಡಳಿತ) ರವೀಂದ್ರ ಇತರರಿದ್ದರು.