ಜಿಲ್ಲೆ

ಸ್ವಚ್ಛತೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಲಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕರೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಗ್ರಾಮ, ಜಿಲ್ಲೆ ಮತ್ತು ರಾಜ್ಯವನ್ನು ಸ್ವಚ್ಛವಾಗಿರಿಸುವುದು ಪ್ರತಿ ನಾಗರಿಕರ ಕರ್ತವ್ಯ. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛೋತ್ಸವ ಅಭಿಯಾನದಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಸ್ವಚ್ಛತಾ ಸೇವೆ ಕೈಗೊಳ್ಳಲಾಗಿದೆ. ಗ್ರಾಮ, ರಾಜ್ಯ, ದೇಶ ಸ್ವಚ್ಛವಾಗಿರಬೇಕೆಂದರೆ ಸಾರ್ವಜನಿಕರ ಪಾತ್ರ ಬಹಳ ಮುಖ್ಯ. ಕೇವಲ ಸರ್ಕಾರದಿಂದ ಎಲ್ಲವೂ ಸಾಧ್ಯವಾಗುವುದಿಲ್ಲ. ಬದಲಿಗೆ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದರು.

ವ್ಯವಸಾಯದಿಂದ ಹೆಚ್ಚಿನ ಲಾಭಗಳಿಸಬಹುದು ಎನ್ನುವುದಕ್ಕೆ ಒಂದು ಎಕರೆ ಭೂಮಿಯಿಂದ ಒಂದು ಲಕ್ಷ ರೂ ಸಂಪಾದನೆ ಮಾಡಿರುವುದು ಉದಾಹರಣೆಯಿದೆ. ಇಲಾಖೆಗಳ ಸಲಹೆ ಹಾಗೂ ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಿ. ಕೃಷಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅನೇಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ವಿಜ್ಞಾನಿಗಳ ಸಲಹೆಗಳ ಮೇರೆಗೆ ವ್ಯವಸಾಯವನ್ನು ಅಭಿವೃದ್ಧಿಪಡಿಸಿ, ಕೃಷಿಯಲ್ಲಿ ಯಶಸ್ವಿಗೊಂಡು ವ್ಯವಹಾರ ಕ್ಷೇತ್ರಗಳಲ್ಲಿ ಲಾಭಗಳಿಸಿ ಎಂದು ಹೇಳಿದರು.

ನಾಗರಿಕರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗಳನ್ನು ತಿಳಿದು ಅವರ ಪರವಾಗಿ ಯೋಜನೆಗಳನ್ನ ರೂಪಿಸಲು ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಸಮೀಕ್ಷೆಗೆ ನೀಡಿರುವ ಸಮಯ ಕಡಿಮೆಯಿದೆ ಎಂಬುವುದು ಇತರರ ಕಲ್ಪನೆ. ನೀಡಿರುವ ಅವಧಿಯಲ್ಲಿ ಪೂರ್ಣವಾಗದೆ ಇದ್ದಲ್ಲಿ ವಿಸ್ತರಿಸುವ ಸಾಧ್ಯತೆಯಿರುತ್ತದೆ. ಆದ್ದರಿಂದ ಯಾರಲ್ಲಿಯೂ ತಪ್ಪು ಕಲ್ಪನೆ ಬೇಡ. ಮುಖ್ಯವಾಗಿ ಜಾತಿ ಗಣತಿಗಾಗಿ ಸಮೀಕ್ಷೆ ನಡೆಯುತ್ತಿಲ್ಲ. ಬದಲಿಗೆ ಜನರ ಸಮಸ್ಯೆ ಪರಿಹರಿಸಲು ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಪ್ರಕ್ರಿಯೆಗೆ ಶಾಲಾ ಶಿಕ್ಷಕರ ಅವಶ್ಯಕತೆಯಿರುವುದರಿಂದ ರಜೆಯ ಸಮಯದಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದರು.

ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ ಇತರರಿದ್ದರು.

ಇದೇ ಸಂದರ್ಭದಲ್ಲಿ ಜಿಪಂನಿಂದ ಅ.2ರವರೆಗೆ ಹಮ್ಮಿಕೊಳ್ಳಲಾಗಿರುವ ಸ್ವಚ್ಛತಾ ಹೀ ಸೇವಾ ಹಾಗೂ ಅ.1 ರಿಂದ 30ರವರೆಗೆ ನಡೆಯಲಿರುವ ಮಾದಕ ಮುಕ್ತ ಕರ್ನಾಟಕ ಅಭಿಯಾನ ಪರಿವರ್ತನೆ ಕುರಿತು ಫೋೀಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.