ನಗರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ. ಹಾಗಾಗಿ ನಗರದ ಜನತೆ ಸ್ವಚ್ಛ ಸರ್ವೆಕ್ಷಣೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜ.4ರಂದು ದೇಶದ 4,237 ನಗರ, ಪಟ್ಟಣಗಳಲ್ಲಿ ಆರಂಭವಾಗಿರುವ ಸಮೀಕ್ಷೆ 28ರವರೆಗೆ ನಡೆಯಲಿದೆ. ಇದರಲ್ಲಿ ಪಾಲಿಕೆ ಅಗ್ರ 100ರೊಳಗಿನ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿದೆ.
ಒಂದು ನಗರಕ್ಕೆ 6 ಸಾವಿರ ಅಂಕಗಳು ನಿಗದಿಯಾಗಿದ್ದು, ಹೆಚ್ಚು ಅಂಕ ಗಳಿಸಿದ ನಗರವನ್ನು ದೇಶದ ಅತ್ಯಂತ ಸ್ವಚ್ಛ ನಗರ ಎಂದು ಘೋಷಣೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ತಂಡದ ನೇರ ವೀಕ್ಷಣೆ, ಜನರ ಪ್ರತಿಕ್ರಿಯೆ, ನಗರದ ಸ್ವಚ್ಛತೆ ಮತ್ತು ಬಯಲುಮುಕ್ತ ಶೌಚಗೃಹ ಹಾಗೂ ಮೂಲ ಸೌಕರ್ಯಗಳ ಸೇವೆ ಒದಗಿಸುವ 4 ವಿಭಾಗಗಳಿಗೆ ತಲಾ 1,500 ಅಂಕ ನೀಡಲಿದೆ. ಇದರಲ್ಲಿ ಜನರ ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಹಲವು ಮಾರ್ಗ ಅನುಸರಿಸುತ್ತಿದೆ.
ಲಕ್ಷ ಜನರ ಪ್ರತಿಕ್ರಿಯೆ ಅಗತ್ಯ: ಸ್ವಚ್ಛ ಸರ್ವೆಕ್ಷಣೆಯಲ್ಲಿ ಪಾಲ್ಗೊಂಡ ನಗರಗಳ ಒಟ್ಟು ಜನಸಂಖ್ಯೆಯ ಶೇ. 1 ಜನರು ನಗರಸ್ವಚ್ಛತೆ ಮತ್ತು ಸೇವಾ ಕಾರ್ಯಗಳ ಬಗ್ಗೆ ಪ್ರತಿಕ್ರಿಯೆ (ಫೀಡ್ಬ್ಯಾಕ್) ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ಶೇ. 1 ಅಂದರೆ ಒಂದು ಲಕ್ಷ ಜನರು ಪ್ರತಿಕ್ರಿಯೆ ನೀಡಬೇಕಿದೆ. ಹಾಗಾಗಿ ಜನರ ಪ್ರತಿಕ್ರಿಯೆಯಿಂದ 1,500 ಅಂಕ ಪಡೆಯುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಟ್ವಿಟರ್, ಫೇಸ್ಬುಕ್ ಸಾಮಾಜಿಕ ಜಾಲತಾಣಗಳನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಹೆಚ್ಚು ಜನರು ಸೇರುವ ಕ್ರೀಡಾಂಗಣ, ಉದ್ಯಾನಗಳು, ಸಮ್ಮೇಳನ ಹಾಗೂ ಉತ್ಸವಗಳಲ್ಲಿ ತಾತ್ಕಾಲಿಕ ಟೆಂಟ್ ನಿರ್ವಿುಸಿ ಜಾಗೃತಿ ಮೂಡಿಸುತ್ತಿದ್ದಾರೆ.
ಸ್ವಚ್ಛತೆ ಮರೆತ ಪಾಲಿಕೆ: ಆನ್ಲೈನ್ನಲ್ಲಿ ಪ್ರತಿಕ್ರಿಯೆ ನೀಡುವಂತೆ ಜಾಗೃತಿ ಮೂಡಿಸುತ್ತಿರುವ ಪಾಲಿಕೆ, ನಗರದಲ್ಲಿ ಸ್ವಚ್ಛತೆ ಮಾಡುವುದನ್ನು ಮರೆತಿದೆ. ಸಾರ್ವಜನಿಕ ಶೌಚಗೃಹಗಳನ್ನು ಸ್ವಚ್ಛವಾಗಿಡಲು ಹಾಗೂ ಬ್ಲಾಕ್ಸ್ಪಾಟ್ಗಳಲ್ಲಿ ಕಸ ಸ್ವಚ್ಛಗೊಳಿಸಿ ಮರಳಿ ಕಸ ಹಾಕದಂತೆ ಜಾಗ್ರತೆ ವಹಿಸುವಲ್ಲಿ ವಿಫಲವಾಗಿದೆ. ಕಸ ಭೂಭರ್ತಿ ಕೇಂದ್ರಗಳು ಭರ್ತಿ ಯಾಗುತ್ತಿರುವುದರಿಂದ ಕಸ ಸುರಿಯಲೂ ಸ್ಥಳ ಸಿಗುತ್ತಿಲ್ಲ. ಇದರಿಂದ ಸ್ವಚ್ಛತೆಗೆ ಮೀಸಲಿಟ್ಟ 1,500 ಅಂಕ ಗಿಟ್ಟಿಸುವುದು ಅನುಮಾನವಾಗಿದೆ.
ನಗರದ ಜನತೆಗೆ ಸೇವೆ ನೀಡುವುದನ್ನು 2019ರ ಏಪ್ರಿಲ್ನಿಂದ ಪರಿಗಣಿಸಲಾಗುತ್ತದೆ. ಹೀಗಾಗಿ ಕಳೆದ 6 ತಿಂಗಳಿಂದ ಜನರ ಯಾವುದೇ ದೂರು ಬಂದರೂ ಶೀಘ್ರ ಪರಿಹಾರ ಮಾಡುತ್ತಿದೆ. ಕಸ ವಿಲೇವಾರಿಗೆ ಇಂದೋರ್ ಮಾದರಿ ಅಳವಡಿಸಿಕೊಳ್ಳುತ್ತಿದೆ.ಕಸವನ್ನು ಮೂಲ ದಲ್ಲಿಯೇ ವಿಂಗಡಿಸಿ ಸಂಸ್ಕರಿಸಿ ವಿಲೇವಾರಿ ಮಾಡುವ ಕ್ರಮ ಅನುಸರಿಸುತ್ತಿದೆ. ಪ್ರಸ್ತುತ ಬಯಲುಮುಕ್ತ ಶೌಚನಗರ (ಒಡಿಎಫ್) ಮಾನ್ಯತೆ ಪಡೆದುಕೊಂಡಿದ್ದು, ಜನರ ಪ್ರತಿಕ್ರಿಯೆಗೆ ಒತ್ತು ನೀಡುತ್ತಿದೆ.
16 ದಿನದಲ್ಲಿ 19 ಸಾವಿರ ಪ್ರತಿಕ್ರಿಯೆ: ಸರ್ವೆಕ್ಷಣೆ ಪ್ರಕ್ರಿಯೆ 28 ದಿನ ನಡೆಯಲಿದೆ (ಜ.4ರಿಂದ ಜ.31). ಸ್ವಚ್ಛತೆ ಮಾಡುವ ಪ್ರಮಾಣ, ಸಾರ್ವ ಜನಿಕ ಸ್ಥಳದ ಸ್ವಚ್ಛತೆ, ರಸ್ತೆಗಳ ಮಾಹಿತಿ, ಶೌಚ ಗೃಹ ನಿರ್ವಹಣೆ, ಕಸ ವಿಂಗಡಣೆ ಕುರಿತ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಪ್ರತಿಕ್ರಿಯೆ ನೀಡಬಹುದು. ಈಗಾಗಲೇ 16 ದಿನ ಮುಗಿದಿದ್ದು, ಜನರ ಪ್ರತಿಕ್ರಿಯೆ ನೀರಸವಾಗಿದೆ. 19,470 ಜನರು ಮಾತ್ರ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿಕ್ರಿಯೆಗೆ ಐದು ಮಾರ್ಗಗಳು
ಸ್ವಚ್ಛ ಸರ್ವೆಕ್ಷಣೆಯಲ್ಲಿ ಜನರು 1969 ಉಚಿತ ಸ್ವಚ್ಛತಾ ಸಹಾಯವಾಣಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಅಭಿವೃದ್ಧಿ ಪಡಿಸಿರುವ ಸ್ವಚ್ಛತಾ ಆಪ್, ಸ್ವಚ್ಛ ಸರ್ವೆಕ್ಷಣ 2020 ಆನ್ಲೈನ್ ಪೋರ್ಟಲ್ (https://swachhsurvekshan2020.org/CitizenFeedback) ಔಟ್ಬ್ಯಾಂಡ್ ಕರೆಗಳು ಮತ್ತು ನಗರಗಳು ಅಭಿವೃದ್ಧಿಪಡಿಸಿದ ಆಪ್ ಮೂಲಕ ಪ್ರತಿಕ್ರಿಯೆ ನೀಡಲು ಅವಕಾಶವಿದೆ. ಆದರೆ ಬಿಬಿಎಂಪಿ, ಸ್ವಚ್ಛಸರ್ವೆಕ್ಷಣೆ ಪ್ರತಿಕ್ರಿಯೆಗೆ ಆಪ್ ಅಭಿವೃದ್ಧಿಪಡಿಸಿಲ್ಲ. ಹಾಗಾಗಿ ಪಾಲಿಕೆ ಆನ್ಲೈನ್ ಪೋರ್ಟಲ್ನಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪ್ರತಿಕ್ರಿಯೆ ನೀಡುವ ಸುಲಭ ಮಾರ್ಗದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿದೆ.
ಸ್ವಚ್ಛ ಸರ್ವೆಕ್ಷಣೆಗೆ ನಗರದಲ್ಲಿ 1 ಲಕ್ಷ ಜನರ ಪ್ರತಿಕ್ರಿಯೆ ಬೇಕಿದೆ. ವಿವಿಧ ಮಾರ್ಗಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 12 ದಿನಗಳು ಬಾಕಿಯಿದ್ದು, ಹೆಚ್ಚಿನ ಜನರು ಫೀಡ್ಬ್ಯಾಕ್ ನೀಡುವ ವಿಶ್ವಾಸವಿದೆ. | ಡಿ. ರಂದೀಪ್ ಬಿಬಿಎಂಪಿ ವಿಶೇಷ ಆಯುಕ್ತ
| ಸತೀಶ್ ಕೆ.ಬಳ್ಳಾರಿ ಬೆಂಗಳೂರು