ಕಾರವಾರ :ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಭಾರತ ಸರ್ವೇಕ್ಷಣೆ-2023 ಸ್ಪರ್ಧೆಯಲ್ಲಿ ಜಿಲ್ಲೆಯ ನಗರಸಭೆಗಳು ಉತ್ತಮ ಸಾಧನೆ ಮಾಡಿದ್ದು, ಪುರಸಭೆ, ಪಟ್ಟಣ ಪಂಚಾಯಿತಿಗಳು ಕಳಪೆ ಸಾಧನೆ ಮಾಡಿವೆ.
ಪ್ರಶಸ್ತಿ ವಿಜೇತ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಷ್ಟ್ರಪತಿಗಳು ಗುರುವಾರ ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಅದರಲ್ಲಿ ಜಿಲ್ಲೆಯ ಯಾವುದೇ ನಗರಗಳು ಪ್ರಶಸ್ತಿ ಪಡೆದಿಲ್ಲ. ಆದರೆ, ನವದೆಹಲಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರವಾರ ಹಾಗೂ ಶಿರಸಿ ನಗರಸಭೆ, ಭಟ್ಕಳ ಪುರಸಭೆಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
13 ನೇ ಸ್ಥಾನದಲ್ಲಿ ಕಾರವಾರ:
ಸಚಿವಾಲಯವು ರ‍್ಯಾಂಕಿಂಗ್ ಪಟ್ಟಿಯನ್ನೂ ಗುರುವಾರವೇ ಬಿಡುಗಡೆ ಮಾಡಿದೆ. 50 ಸಾವಿರದಿಂದ 1 ಲಕ್ಷದವರೆಗಿನ ಜನಸಂಖ್ಯೆಯಿರುವ ದಕ್ಷಿಣ ಭಾರತದ ನಗರಗಳ ಪೈಕಿ ಕಾರವಾರ ನಗರಸಭೆಯು 5176 ಅಂಕಗಳೊಂದಿಗೆ 13 ನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ 3 ನೇ ಸ್ಥಾನ ಪಡೆದಿದೆ. ಕಾರವಾರ ಕಳೆದ ಬಾರಿ ದಕ್ಷಿಣ ಭಾರತದಲ್ಲಿ 22 ನೇ ಸ್ಥಾನದಲ್ಲಿತ್ತು. ಶಿರಸಿ ನಗರಸಭೆ 3857 ಅಂಕಗಳೊಂದಿಗೆ 60 ನೇ ಸ್ಥಾನ ಪಡೆದಿದೆ. ಕಳೆದ ಬಾರಿ 80 ನೇ ಸ್ಥಾನದಲ್ಲಿತ್ತು. ಈ ಬಾರಿ ಶಿರಸಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದಿದೆ. ಕಳೆದ ಬಾರಿ ದಕ್ಷಿಣ ಭಾರತದಲ್ಲೇ ಅತ್ಯಂತ ಕಳಪೆ ಸ್ವಚ್ಛತೆಯ ನಗರವಾಗಿ 200 ನೇ ಸ್ಥಾನದಲ್ಲಿದ್ದ ದಾಂಡೇಲಿ ನಗರಸಭೆ ಈ ವರ್ಷ 115 ನೇ ಸ್ಥಾನಕ್ಕೆ ಇಳಿಕೆ ಕಂಡಿದೆ.
ಪುರಸಭೆಗಳ ರ‍್ಯಾಂಕಿಂಗ್ ಕುಸಿತ:
ಪುರಸಭೆ, ಪಟ್ಟಣ ಪಂಚಾಯಿತಿಗಳು ಕಳಪೆ ಸಾಧನೆ ಮಾಡಿದ್ದು, ಸ್ಥಾನದಲ್ಲಿ ತೀವ್ರ ಕುಸಿತ ಕಂಡಿದೆ. ದಕ್ಷಿಣ ಭಾರತದಲ್ಲಿ 25 ರಿಂದ 50 ಸಾವಿರ ಜನಸಂಖ್ಯೆ ಇರುವ ಶಹರಗಳ ಪೈಕಿ ಕುಮಟಾ 2022 ರಲ್ಲಿ 22 ನೇ ಸ್ಥಾನದಲ್ಲಿತ್ತು. ಈ ಬಾರಿ 124 ನೇ ಸ್ಥಾನಕ್ಕೆ ಕುಸಿದಿದೆ. ಭಟ್ಕಳ 44 ರಿಂದ 108 ನೇ ಸ್ಥಾನಕ್ಕೆ ಕುಸಿದಿದೆ.
15 ರಿಂದ 25 ಸಾವಿರ ಜನಸಂಖ್ಯೆ ಇರುವ ಶಹರಗಳ ಪೈಕಿ ಹೊನ್ನಾವರ 32 ರಿಂದ 154, ಯಲ್ಲಾಪುರ 36 ರಿಂದ 39, ಅಂಕೋಲಾ 55 ರಿಂದ 109, ಹಳಿಯಾಳ 60 ರಿಂದ 67, ಜಾಲಿ 54 ರಿಂದ 101 ನೇ ಸ್ಥಾನಕ್ಕೆ ಕುಸಿದಿವೆ. ಮುಂಡಗೋಡು ಪಟ್ಟಣ ಪಂಚಾಯಿತಿಯು 114 ರಿಂದ 78 ನೇ ಸ್ಥಾನಕ್ಕೆ ಏರಿದೆ. 15 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯ ಪಟ್ಟಣಗಳಲ್ಲಿ ಸಿದ್ದಾಪುರ ಪಪಂ 21 ರಿಂದ 270 ನೇ ಸ್ಥಾನಕ್ಕೆ ಕುಸಿದಿದೆ. ಮಂಕಿ ಪಪಂ 325 ನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: ಜಿಲ್ಲೆಯಲ್ಲಿದ್ದಾರೆ 310 ಲಿಂಗತ್ವ ಅಲ್ಪಸಂಖ್ಯಾತರು
ರ‍್ಯಾಂಕಿಂಗ್ ಕೊಡುವ ಕ್ರಮ ಹೇಗೆ..?
ಈ ಸರ್ವೇಕ್ಷಣೆಯಡಿ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಮನೆ, ಮನೆ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ ಮುಂತಾದ ಸ್ವಚ್ಛತೆ ಸಂಬಂಧ ವಿವರಗಳನ್ನು ಮಂತ್ರಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಸಾರ್ವಜನಿಕರು ತಮ್ಮ ಶಹರದ ಬಗ್ಗೆ ಆನ್‌ಲೈನ್‌ನಲ್ಲಿ ಅಭಿಪ್ರಾಯ ತಿಳಿಸಲು ಅವಕಾಶವಿರುತ್ತದೆ. ನಂತರ ಮಂತ್ರಾಲಯದಿಂದ ನಿಯೋಜಿತಗೊಂಡ ತಂಡ ಸ್ಥಳ ಪರಿಶೀಲನೆ ನಡೆಸಿ, ದಾಖಲೆ ಹಾಗೂ ಜನಾಭಿಪ್ರಾಯ ಸರಿ ಇರುವ ಬಗ್ಗೆ ಪರಿಶೀಲನೆ ನಡೆಸುತ್ತದೆ. ಅಲ್ಲದೆ, ಸ್ವಚ್ಛತೆಯ ವಿಷಯದಲ್ಲಿ ಹೊಸ ಅನುಕ್ರಮಗಳನ್ನೂ ಇದರಲ್ಲಿ ಪರಿಗಣಿಸಲಾಗುತ್ತದೆ. ಸ್ವರ್ಧೆಯಲ್ಲಿ ದೇಶದ 4400 ಕ್ಕೂ ಅಧಿಕ ಶಹರಗಳನ್ನು ಪರಿಗಣಿಸಿ ಪ್ರತಿ ವರ್ಷ ಪ್ರಶಸ್ತಿ ಘೋಷಿಸಲಾಗುತ್ತದೆ. ಅಲ್ಲದೆ, ಶಹರಗಳಿಗೆ ಸ್ಟಾರ್ ರ‍್ಯಾಂಕಿಂಗ್ ನೀಡಲಾಗುತ್ತದೆ.