ಗದಗ:
ನಗರದ ಭೀಷ್ಮಕೆರೆಯಲ್ಲಿ ಅ.21 ರಂದು ಜರುಗಿದ ಹಾಯಿ ದೋಣಿ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಖುದ್ದಾಗಿ ಭೇಟಿ ನೀಡಿ, ಅಥವಾ ಕರೆಮಾಡಿ ಆಮಂತ್ರಣ ನೀಡದ್ದಿರಿಂದ ನನಗೆ ಅವಮಾನ ಮತ್ತು ನನ್ನ ಹಕ್ಕು ಚ್ಯುತಿ ಆಗಿದೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ದೂರಿನ ಮೇರೆಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಕೋಟ್ರೇಶ್ವರ ವಿಭೂತಿ ಅವರಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ.
ಶಾಸಕ ಎಸ್.ವಿ. ಸಂಕನೂರು ಅವರ ಹಕ್ಕು ಚ್ಯುತಿ ಆಗಿದೆ. ಈ ಹಿನ್ನೆಲೆ ನಿಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರುಗಿಸಬಾರದು? ಈ ಬಗ್ಗೆ ನೋಟೀಸ್ ನೀಡಿದ ಮೂರು ದಿನಗಳ ಒಳಗೆ ಲಿಖಿತ ರೂಪದಲ್ಲಿ ಕಾರ್ಯಾಲಯಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿ ನೋಟೀಸ್ ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಶಾಸಕ ಎಸ್.ವಿ. ಸಂಕನೂರು ಪ್ರವಾಸದ ಸಂದರ್ಭದಲ್ಲಿ ಅವರ ಮನೆಗೆ ಆಮಂತ್ರಣ ಪತ್ರಿಕೆ ತಲುಪಿಸಲಾಗಿದೆ. ಆದರೆ, ಖುದ್ದಾಗಿ ಭೇಟಿ ನೀಡಿ ಅಥವಾ ಕರೆ ಮಾಡಿ ಆಮಂತ್ರಿಸದ ಕಾರಣ, ನಗರದಲ್ಲಿ ಇದ್ದರೂ ಕೂಡ ಅ.21 ರಂದು ನಡೆದ ಹಾಯಿ ದೋಣಿ ಭೀಷ್ಮ ಕರೆ ಕಾರ್ಯಕ್ರಮದಲ್ಲಿ ಎಸ್.ವಿ. ಸಂಕನೂರು ಅವರು ಭಾಗವಹಿಸಲು ಸಾಧ್ಯವಾಗಿರಲಿಲ್ಲ.