ಕನಕಗಿರಿ: ಇಲ್ಲಿನ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಿಂದ ಪ್ರತಿ ವರ್ಷ ನೀಡಲಾಗುವ ಸುವರ್ಣಗಿರಿ ಪ್ರಶಸ್ತಿಯನ್ನು ಪ್ರಸಕ್ತ ಸಾಲಿಗೆ ಪದ್ಮಶ್ರೀ ಪುರಸ್ಕೃತೆ ಭೀಮವ್ವ ಶಿಳ್ಳಿಕ್ಯಾತರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಸದಸ್ಯ ಡಾ.ಡಿ.ಎಂ ಅರವಟಗಿಮಠ ತಿಳಿಸಿದ್ದಾರೆ.
ಇಲ್ಲಿನ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಲ್ಲಿ ಶನಿವಾರ ಬಸವ ಜಯಂತಿಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
2019ರಿಂದ ಸುವರ್ಣಗಿರಿ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಸಕ್ತ ವರ್ಷ ನಮ್ಮದೇ ಜಿಲ್ಲೆಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ ಅವರಿಗೆ ನೀಡಲು ಆಯ್ಕೆ ಮಾಡಲಾಗಿದೆ. ಏ.30ರಂದು ಶ್ರೀಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
2023-24ನೇ ಸಾಲಿನ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವಿರೂಪಾಕ್ಷರೆಡ್ಡಿ ಓಣಿಮನಿ, 2022ನೇ ಸಾಲಿನ ರಾಜ್ಯ ಅರಣ್ಯ ಇಲಾಖೆ ಪದಕ ಪುರಸ್ಕೃತ ಈರಪ್ಪ ಹಾದಿಮನಿ ಹಾಗೂ ಪೌರ ಕಾರ್ಮಿಕರಿಗೆ ಏ.29ರಂದು ಹಾಗೂ 2023-24ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ವಿಜಯಕುಮಾರಗೆ ಏ.30ರಂದು ಗುರು ರಕ್ಷೆ ನೀಡಲಾಗುವುದು ಎಂದರು.
ಶರಣಪ್ಪ ಭತ್ತದ್ ಮಾತನಾಡಿ, ಬಸವ ಜಯಂತಿ ನಿಮಿತ್ತ ಏ.30ರಂದು ಆರೋಗ್ಯ ಶಿಬಿರ ಹಾಗೂ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ ಬಸವೇಶ್ವರ ಮೂರ್ತಿಯ ಮೆರವಣಿಗೆ ಕಲಾ ತಂಡಗಳೊಂದಿಗೆ ನಡೆಯಲಿದೆ. ಏ.29 ಹಾಗೂ 30ರಂದು ಎರಡು ದಿನಗಳ ಕಾಲ ನಾನಾ ಹಾಸ್ಯ ಕಲಾವಿದರಿಂದ ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.
ಶರಣಪ್ಪ ಭತ್ತದ, ವಾಗೇಶ್ ಹಿರೇಮಠ, ನಾಗಪ್ಪ ಜನಾದ್ರಿ, ವೀರೇಶ ಸಮಗಂಡಿ, ಮಹಾಂತೇಶ್ ಸಜ್ಜನ್, ಸಣ್ಣ ಕನಕಪ್ಪ ಮೃತ್ಯುಂಜಯ ಸ್ವಾಮಿ ಭೂಸನೂರ ಮಠ, ವೀರಭದ್ರಪ್ಪ ಕುಂಬಾರ ಇತರರಿದ್ದರು.