ಜಿಲ್ಲೆ

ಬಸ್​ಗಳಿಲ್ಲದೆ ಬಿಕೋ ಎನ್ನುತ್ತಿರುವ ಸಹಕಾರ ನಗರದ ಸುವರ್ಣ ಕರ್ನಾಟಕ ಬಸ್ ನಿಲ್ದಾಣ

ಬೆಂಗಳೂರು: ಕನ್ನಡದ ಮೇಲಿನ ಪ್ರೀತಿ,ಅಭಿಮಾನಕ್ಕಾಗಿ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸಮಾಜ ಸೇವಕರಾದ ಎಂ.ಎಸ್.ಸುರೇಶ್ ಕುಮಾರ್ ಎಂಬುವವರು ತಮ್ಮ ಸ್ವಂತ ಹಣದಿಂದ ಸಹಕಾರ ನಗರದಲ್ಲಿ ಕಟ್ಟಿಸಿದ್ದ ಸುವರ್ಣ ಕರ್ನಾಟಕ ಬಸ್ ನಿಲ್ದಾಣ ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

2017 ರಲ್ಲಿ ನಿರ್ಮಿಸಿದ ಸುವರ್ಣ ಕರ್ನಾಟಕ ಬಸ್ ನಿಲ್ದಾಣದಲ್ಲಿ ಕನ್ನಡದ ಬಗೆಗಿನ ಹಲವು ಮಾಹಿತಿಗಳನ್ನು ಹಾಕಲಾಗಿದೆ. ಕಟ್ಟಡದ ವಿನ್ಯಾಸ, ಸೌಲಭ್ಯ, ಸ್ವಚ್ಚತೆ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗ 3-4 ಬಸ್ಸುಗಳನ್ನು ಈ ಮಾರ್ಗದಲ್ಲಿ ಓಡಾಡುವ ವ್ಯವಸ್ಥೆ ಇಲಾಖೆ ಕೈಗೊಂಡಿತ್ತು.

ಮಾಧ್ಯಮಗಳಲ್ಲಿ ಬಂದ ಸುದ್ದಿ ನೋಡಿದ ನಗರವಾಸಿಗಳು ಈ ಬಸ್ ನಿಲ್ದಾಣ ನೋಡಲು ಬೇರೆ ಬೇರೆ ಭಾಗಗಳಿಂದ ಬಂದು ೆಟೋ ತೆಗೆದುಕೊಂಡು ಖುಷಿ ಪಡುತ್ತಿದ್ದರು. ಈ ಬಸ್ ನಿಲ್ದಾಣದ ಕುರಿತು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು.

ಆದರೆ ಸದ್ಯ ಈ ಬಸ್ ನಿಲ್ದಾಣದ ಮೂಲಕ ಮಾರ್ಗ ಸಂಖ್ಯೆ 284ರ ಒಂದೇ ಬಸ್ ಮೆಜೆಸ್ಟಿಕ್‌ಗೆ ಸಂಚರಿಸುತ್ತಿದೆ. ಮಾರ್ಕೆಟ್ ಮತ್ತಿತರ ಕಡೆ ಹೋಗುವ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆಯನ್ನು ಒತ್ತಾಯಿಸಿದ್ದಾರೆ. ನಿಸ್ವಾರ್ಥವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಸಮಗ್ರ ಮಾಹಿತಿಯುಳ್ಳ ಬಸ್ ನಿಲ್ದಾಣವೊಂದನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿರುವ ಕಾರ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾದ್ದು ಸಾರಿಗೆ ಇಲಾಖೆಯ ಕರ್ತವ್ಯ.