ಜಿಲ್ಲೆ

ಎಲೆಕೆರೆ ಹ್ಯಾಂಡ್‌ಪೋಸ್ಟ್ ಬಳಿ ಸೇತುವೆ ಕುಸಿಯುವ ಭೀತಿ: ಸಾರ್ವಜನಿಕರಿಗೆ ಹೆಚ್ಚಿದ ಆತಂಕ

ಪಾಂಡವಪುರ: ಪಟ್ಟಣದ ಕೆಆರ್‌ಎಸ್ ಮುಖ್ಯರಸ್ತೆಯ ಎಲೆಕೆರೆ ಹ್ಯಾಂಡ್‌ಪೋಸ್ಟ್ ಬಳಿ ವಿಶ್ವೇಶ್ವರಯ್ಯ ನಾಲೆಗೆ ನಿರ್ಮಿಸಿರುವ ಸೇತುವೆ ಕುಸಿಯುವ ಹಂತ ತಲುಪಿದ್ದು, ಭಾರಿ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ.

ಪಾಂಡವಪುರದಿಂದ ಎಲೆಕೆರೆ, ಅರಳಕುಪ್ಪೆ, ಕಟ್ಟೇರಿ, ಕೆಆರ್‌ಎಸ್, ಬನ್ನಂಗಾಡಿ, ಡಿಂಕಾ ಹಾಗೂ ಕೆ.ಆರ್.ಪೇಟೆಗೆ ತಲುಪಲು ಪ್ರಮುಖವಾಗಿರುವ ಮುಖ್ಯರಸ್ತೆಯ ಮಧ್ಯೆ ಹಾದು ಹೋಗಿರುವ ವಿಶ್ವೇಶ್ವರಯ್ಯ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಸಂಪೂರ್ಣ ಬಿರುಕು ಬಿಟ್ಟಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸೇತುವೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸದಿದ್ದರೆ ದೊಡ್ಡ ಅನಾಹುತ ಸಂಭವಿಸುವುದರಲ್ಲಿ ಅನುಮಾನವೇ ಇಲ್ಲ ಎಂಬಷ್ಟರ ಮಟ್ಟಿಗೆ ಸೇತುವೆ ದುಸ್ಥಿತಿ ತಲುಪಿದೆ.

ಕೆ.ಆರ್.ಪೇಟೆ, ಚನ್ನರಾಯಪಟ್ಟಣ, ಶಿವಮೊಗ್ಗ, ಅರಸೀಕೆರೆ, ಹಾಸನ, ಚಿಕ್ಕಮಗಳೂರು, ಧರ್ಮಸ್ಥಳ ಸೇರಿದಂತೆ ಅನೇಕ ಸ್ಥಳಗಳಿಗೆ ಮೈಸೂರಿನಿಂದ ತೆರಳುವ ಬಸ್‌ಗಳು ಈ ಮಾರ್ಗವಾಗಿಯೇ ಸಂಚರಿಸಬೇಕಿದೆ. ಸೇತುವೆ ಮೇಲೆ ಒತ್ತಡ ಹೆಚ್ಚುತ್ತಿದ್ದಂತೆ ಅಪಾಯವೂ ಸನಿಹವಾಗುತ್ತದೆ ಎಂಬುದು ಸ್ಥಳೀಯರ ಆತಂಕವಾಗಿದೆ.

ರಸ್ತೆ ಮೇಲಿನ ಒತ್ತಡ ತಡೆಯಲು ಸೇತುವೆ ಕೆಳಭಾಗದಲ್ಲಿ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಕಬ್ಬಿಣದ ಪ್ಲೇಟ್‌ಗಳು ತುಕ್ಕು ಹಿಡಿದು ನಾಲ್ಕೈದು ಇಂಚು ಬಿರುಕು ಬಿಟ್ಟಿದೆ. ಪರಿಣಾಮ, ಸೇತುವೆ ಬಾಗಿದಂತೆ ಗೋಚರವಾಗುತ್ತಿದೆ. ಹೀಗಾಗಿ, ಭಾರಿ ಗಾತ್ರದ ವಾಹನಗಳು ಹೆಚ್ಚಿನ ಲೋಡ್ ತುಂಬಿಕೊಂಡು ಸಂಚರಿಸಿದರೆ ಯಾವಾಗ ಅಪಾಯ ಸಂಭವಿಸುತ್ತದೆ ಎಂಬ ಭಯ ಕಾಡುತ್ತಿದೆ.

ಸೇತುವೆಯ ಕಬ್ಬಿಣದ ಪ್ಲೇಟ್‌ಗಳು ಪಿಲ್ಲರ್ ಮೇಲೆ ಕುಳಿತಿದ್ದು ಬಿರುಕು ಬಿಟ್ಟಿರುವ ಪರಿಣಾಮ ಪ್ಲೇಟ್ ಕೆಳಮುಖವಾಗಿ ಬಾಗುತ್ತಿವೆ. ವಾಹನಗಳ ಸಂಚರದ ಜತೆಗೆ, ಹೆಚ್ಚಿನ ಒತ್ತಡ ಬಿದ್ದರೆ ಕಬ್ಬಿಣದ ಪ್ಲೇಟ್‌ಗಳು ಕುಸಿದು ಸೇತುವೆ ಬೀಳುವ ಸಂಭವ ಹೆಚ್ಚಾಗಿದೆ.

ಸೇತುವೆ ದಿನೇ ದಿನೆ ಶಿಥಿಗೊಳ್ಳುತ್ತಿದೆ. ಈಗಾಗಲೇ ಅರ್ಧಕ್ಕೂ ಹೆಚ್ಚು ಭಾಗ ಸೇತುವೆಯ ಕಬ್ಬಿಣದ ಭಾಗಗಳು ತುಕ್ಕು ಹಿಡಿದಿವೆ. ಸೇತುವೆ ಪಿಲ್ಲರ್ ಮೇಲೆ ನಿಂತಿರುವ ಕಾರಣ ಈವರೆಗೂ ಒತ್ತಡ ತಡೆದಿದೆ. ಆದರೆ ಇದು ಹೆಚ್ಚು ಕಾಲ ಹೀಗೆಯೇ ಇರುತ್ತದೆಂದು ಹೇಳುವುದಕ್ಕೆ ಆಗಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸೇತುವೆ ನಿರ್ಮಾಣವಾಗಿ ಎರಡು ದಶಕಗಳು ಕಳೆದಿದ್ದು, ಇದರ ಪಕ್ಕದಲ್ಲೇ ಹಳೆಯ ಮತ್ತೊಂದು ಸೇತುವೆ ಇದೆ. ಇದು ಬಳಕೆಗೆ ಯೋಗ್ಯವೋ ಅಥವಾ ಇಲ್ಲವೋ ಎಂಬುದನ್ನು ನೀರಾವರಿ ಇಲಾಖೆ ಅಧಿಕಾರಿಗಳು ದೃಢಪಡಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೆ ಎರಡು ಸೇತುವೆಗಳ ಮೇಲೂ ವಾಹನಗಳು ಸಂಚರಿಸುತ್ತಿದ್ದವು. ಆಗ ಒಂದು ಸೇತುವೆ ಮೇಲಿನ ಒತ್ತಡ ಕಡಿಮೆಯಾಗುತ್ತಿತ್ತು.

ಆದರೆ ಹಳೇ ಸೇತುವೆ ಮೇಲೆ ಯಾವುದೇ ವಾಹನಗಳು ಸಂಚರಿಸುತ್ತಿಲ್ಲ. ತೂಬಿನಕೆರೆಯಿಂದ ಹೊಸಸಾಯಪ್ಪನಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಹಳೇ ಸೇತುವೆವರೆಗೆ ಮಾತ್ರ ಡಾಂಬರೀಕರಣ ಕೈಗೊಂಡು ಸೇತುವೆ ಮೇಲೆ ಡಾಂಬರೀಕರಣ ಮಾಡಿಲ್ಲ. ಹೀಗಾಗಿ ಹಳೇ ಸೇತುವೆ ಬಳಕೆಯಾಗದೆ ಎಲ್ಲ ಒತ್ತಡವೂ ಒಂದೇ ಸೇತುವೆ ಮೇಲೆ ಬೀಳುತ್ತಿದೆ. ಅಧಿಕಾರಿಗಳು ತಕ್ಷಣ ಸೇತುವೆಯ ಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳದಿದ್ದರೆ ಭಾರಿ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ನಾಗರಿಕರು ಎಚ್ಚರಿಸಿದ್ದಾರೆ.