ಬೆಂಗಳೂರು: ವ್ಯಕ್ತಿ ಕಣ್ಮರೆಯಾದರೂ ಆತನು ಮಾಡಿದ ಸಾಧನೆ ಮತ್ತು ನಿಸ್ವಾರ್ಥ ಗುಣಗಳಿಂದಾಗಿ ಶಾಶ್ವತವಾಗಿ ಉಳಿಯುತ್ತಾನೆ ಎಂದು ಸುತ್ತೂರು ವೀರಸಿಂಹಾಸನ ಮಠದ ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದ್ದಾರೆ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೇಂದ್ರ ಕಾಯಾಲಯದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯ ಪ್ರತಿಷ್ಠಾನ ಶುಕ್ರವಾರ ಹಮ್ಮಿಕೊಂಡಿದ್ದ ‘ಸರಳ ಸಜ್ಜನಿಕೆಯ ಸಾಕಾರಮೂರ್ತಿ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.
ತಮಗಾಗಿ ಬದುಕುವವರನ್ನು ಜನ ಬಹುಬೇಗ ಮರೆಯುತ್ತಾರೆ. ಆದರೆ ಸಮಾಜಕ್ಕಾಗಿ, ಇತರರಿಗಾಗಿ, ನಿಸ್ವಾರ್ಥವಾಗಿ ಬದುಕು ಸೆವೆಸಿದವರು ಮರಣದ ನಂತರವೂ ಶಾಶ್ವತವಾಗಿರುತ್ತಾರೆ. ಅಂತಹವರಲ್ಲಿ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯನವರು ಒಬ್ಬರು. ಜೀವನದುದ್ದಕ್ಕೂ ಸರಳ ಸಜ್ಜನಿಕೆ ಮೈಗೂಡಿಸಿಕೊಂಡು, ಸಮಾಜದ ಹಿತಚಿಂತನೆಯನ್ನು ಮಾಡುತ್ತಾ ವಿರಕ್ತ ಜೀವನ ಸಾಗಿಸಿದ ನಿಸ್ವಾರ್ಥ ವ್ಯಕ್ತಿಯಾಗಿದ್ದರು. ತೀರಾ ಬಡತನದಲ್ಲಿ ಬೆಳೆದು ಬಂದ ಮಲ್ಲಿಕಾರ್ಜುನಯ್ಯ ತಾಂತ್ರಿಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಾಡಿನ ಹಲವಾರು ಖ್ಯಾತ ಸಾಹಿತಿಗಳು, ಚಿಂತಕರ ಒಡನಾಡಿಗಳಾಗಿದ್ದರು. ವಿಶೇಷವಾಗಿ ಶಿವರಾಮ ಕಾರಂತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ಕಾರಂತರ ಕುಟುಂಬ ಸದಸ್ಯರಂತಿದ್ದರು. ಹಿಂದೊಮ್ಮೆ ಶಿವರಾಮ ಕಾರಂತರನ್ನು ಸುತ್ತೂರು ಮಠದ ಆಸ್ಪತ್ರೆಗೆ ಕರೆತಂದಿದ್ದಾಗ; ಹೊರರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡುತ್ತಿರುವುದನ್ನು ಗಮನಿಸಿದ ಕಾರಂತರು ‘ದೇಶದಲ್ಲಿ ಯಾವುದು ಉಚಿತವಾಗಿ ಕೊಡಬಾರದು’ ಎಂದು ಸಲಹೆ ನೀಡಿದ್ದನ್ನು ಸ್ವಾಮೀಜಿ ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಸಿದ್ಧಗಂಗೆ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ನಾಡೋಜ ಗೊ.ರು.ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಶಿವರಾಮ ಕಾರಂತರ ಪುತ್ರಿ ಮಾಳವಿಕ ಕಪೂರ್, ಪುತ್ರ ವನ್ಯಜೀವಿ ತಜ್ಞ ಪದ್ಮಶ್ರೀ ಉಲ್ಲಾಸ್ ಕಾರಂತ್, ಕೃತಿ ಸಂಪಾದಕ ಸಿದ್ಧಗಂಗಪ್ಪ, ಗೀತಾಂಜಲಿ ಗ್ರಾಫಿಕ್ಸ್‌ನ ಮುದ್ರಕ ಜಿ.ನಾಗಸುಂದರ್, ಕೊಂಡಜ್ಜಿ ಷಣ್ಮುಖಪ್ಪ, ರೇಣುಕಾರಾಧ್ಯ ಮತ್ತಿತರರು ಪಾಲ್ಗೊಂಡಿದ್ದರು.
ಜಾತ್ಯಾತೀತವಾಗಿ ನಾಡಿನ ಮಠಗಳು ಮಾಡುತ್ತಿರುವ ದಾಸೋಹ ಕರ್ನಾಟಕ ರಾಜ್ಯದ ಬಹುದೊಡ್ಡ ಶಕ್ತಿಯಾಗಿದ್ದು, ಅಂತಹ ಮಠಗಳು ಇಲ್ಲದೇ ಹೋಗಿದ್ದರೆ ಲಕ್ಷಾಂತರ ಜನರ ಬದುಕು ಬಹಳ ದುಸ್ಥಿತಿಯಲ್ಲಿರುತ್ತಿತ್ತು ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ. ಕನಕಪುರದಲ್ಲಿರುವ ದೇಗುಲ ಮಠ ಇಲ್ಲದೇ ಹೋಗಿದ್ದರೆ ನಾನು ಒಬ್ಬ ಸಾಮಾನ್ಯ ಕೃಷಿಕಾರ್ಮಿಕನಾಗಿ ಉಳಿಯುತ್ತಿದ್ದೆ ಎಂದು ತಮ್ಮ ಬಾಲ್ಯವನ್ನು ನೆನೆಸಿಕೊಂಡರು.
-ಶ್ರೀಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗೆ ಮಠ.