ಜಿಲ್ಲೆ

ಸಂಸ್ಕಾರ ಬಿತ್ತುವ ಮಠಗಳು ಅಗತ್ಯ

ಕೋಲಾರ: ಸಮಾಜಕ್ಕೆ ಸಂಸ್ಕಾರ ಕಲಿಸುವಲ್ಲಿ ಮಠಗಳು ಪ್ರಮುಖ ಪಾತ್ರವಹಿಸುತ್ತಿವೆ, ರಾಜ್ಯದಲ್ಲಿ ಸಿದ್ಧಗಂಗೆ ಮತ್ತು ಸುತ್ತೂರು ದೇಶಿಕೇಂದ್ರ ಮಠಗಳು ಅಗ್ರ ಸ್ಥಾನದಲ್ಲಿವೆ ಎಂದು ಶ್ರೀಮದ್​ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀತೇಜೇಶಲಿಂಗ ಸ್ವಾಮೀಜಿ ಬಣ್ಣಿಸಿದರು.

ಮೈಸೂರು ಜಿಲ್ಲೆಯ ಸುತ್ತೂರಿನ ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಜಾತ್ರಾ ಮಹೋತ್ಸವ ಪ್ರಸಾರದ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಜನೆ ಮೂಲಕ ಸಮಾಜದಲ್ಲಿ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ಮಠಗಳು ಕೆಲಸ ಮಾಡುತ್ತಿವೆ. ಮಠಗಳನ್ನು ಬೆಳೆಸಲು ಭಕ್ತರೇ ಶಕ್ತಿಯಾಗಬೇಕು. ಜಾತ್ರಾ ಮಹೋತ್ಸವ ಮೂಲ ಉದ್ದೇಶವು ಸಂಘಟನೆಯಾಗಿದೆ. ರಥಯಾತ್ರೆಯ ಮೂಲಕ ಮಾನವ ಧರ್ಮದ ಜಾಗೃತಿ ಮೂಡಿಸಲಾಗುತ್ತಿದೆ. ಸಮಾಜವನ್ನು ಉತ್ತಮ ಸಂಸ್ಕಾರದತ್ತ ಕೊಂಡೊಯ್ಯಲು ಮಕ್ಕಳಿಗೆ ವಿದ್ಯಾರ್ಜನೆ ನೀಡಲಾಗುತ್ತಿದೆ ಎಂದರು.

ಮಠಗಳು ಇದೇ ಮಾದರಿಯಲ್ಲಿ ಶಿಕ್ಷಣ ನೀಡುವ ಮಟ್ಟಕ್ಕೆ ಬೆಳೆಯಬೇಕು. ಕೋಲಾರದಲ್ಲಿ ಸಮಾಜವನ್ನು ಜಾಗೃತಿಗೊಳಿಸುವ ಕಾಯಕವನ್ನು ಮಾಲೂರಿನ ಬೆಳ್ಳಾವಿ ಮಠ ಹಾಗೂ ನಾಗಲಾಪುರ ಮಠಗಳು ಮಾಡುತ್ತಿವೆ ಎಂದರು.

ಬೆಳ್ಳಾವಿ ಮಠದ ಶ್ರೀ ಮಹಾಂತೇಶ ಸ್ವಾಮೀಜಿ ಮಾತನಾಡಿ, ವೀರಶೈವ ಮಠಗಳು ವಿದ್ಯೆ ಜತೆಗೆ ಉತ್ತಮ ಸಂಸ್ಕಾರ ಕಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

ಎಲ್ಲ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪೈಕಿ ಬಹುತೇಕ ಅಧಿಕಾರಿಗಳು ಸುತ್ತೂರು ಹಾಗೂ ಸಿದ್ಧಗಂಗಾ ಮಠದಲ್ಲಿ ವಿದ್ಯೆ ಕಲಿತವರಾಗಿದ್ದಾರೆ. ತಾಯಿ ಧರಿಸಿದ ಲಿಂಗವನ್ನು 11ನೇ ದಿನದ ಮಗುವಿಗೆ ಕಟ್ಟುತ್ತಾರೆ. 8ನೇ ವರ್ಷಕ್ಕೆ ಶಿವಾದೀಕ್ಷೆ ಮಾಡಬೇಕು, ಲಿಂಗಧಾರಣೆ ಮಾಡಿ ಶಿವಪೂಜೆ ಹೇಳಿ ಕೊಡುವ ಮೂಲಕ ಸಮಾಜಕ್ಕೆ ಮಾದರಿಯಾಗುವುದರಲ್ಲಿ ಸಂಶಯವಿಲ್ಲ ಎಂದರು.

ಪ್ರಚಾರ ರಥದ ಸಂಚಾಲಕ ಪಂಚಾಕ್ಷರಿ ಮಾತನಾಡಿ, ಸುತ್ತೂರು ಕ್ಷೇತ್ರವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಜ.26 ರಿಂದ 31ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, 650 ಭಜನಾ ಮೇಳಗಳು ಭಾಗವಹಿಸಲಿವೆ. ವಿವಿಧ ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಹರಿಕಥಾ ವಿದ್ವಾನ್​ ಎನ್​.ಆರ್​.ಜ್ಞಾನಮೂರ್ತಿ, ಗೆಜೆಟೆಡ್​ ನಿವೃತ್ತ ಅಧಿಕಾರಿ ಮಹೇಶ್ವರಪ್ಪ, ಬೈಲಪ್ಪ, ಸುಮಾ, ಕೆ.ಬಿ.ಜಗದೀಶ್​ ಇತರರಿದ್ದರು.