ಜಿಲ್ಲೆ

ಸರ್ವ ಸಿದ್ಧಾಂತದ ಸಾರ ರೂಪವೇ ಸೂತ್ರ; ಕಾಶೀ ಜಗದ್ಗುರುಗಳ ಅಭಿಮತ

ಬೆಂಗಳೂರು: ಜಗತ್ತಿನ ಎಲ್ಲ ದಾರ್ಶನಿಕರು ತಮ್ಮ ತಮ್ಮ ಸಿದ್ಧಾಂತಗಳನ್ನು ಸೂತ್ರ ರೂಪದಲ್ಲಿ ಉಪದೇಶಿಸಿದ್ದು, ಸರ್ವ ಸಿದ್ಧಾಂತಗಳ ಸಾರ ರೂಪವೇ ಸೂತ್ರಗಳು ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಿಸಿದ್ದಾರೆ. ಬೆಂಗರಳೂರು ನಗರ ಸಮಸ್ತ ವೀರಶೈವ ಲಿಂಗವಂತ ಮಹಾ ಸಂಘಟನೆ ಭಾರತ್ ನಗರದ ಶ್ರೀಮತಿ ಪುಟ್ಟರುದ್ರಮ್ಮ ಆರ್.ವಿ.ಭದ್ರಯ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸೂತ್ರಗಳು ಕಡಿಮೆ ಅಕ್ಷರಗಳಿಂದ ಕೂಡಿದ್ದರೂ, ಸಮಗ್ರ ಸಿದ್ಧಾಂತರ ಸಾರ ರೂಪವಾಗಿರುತ್ತವೆ. ಆ ನಿಟ್ಟಿನಲ್ಲಿ ಜಗತ್ತಿಗೆ ಬಂದಿರುವ ಎಲ್ಲ ಸೂತ್ರಗಳಿಗಿಂತ ಮೊದಲು ಜಗದ್ಗುರು ಪಂಚಾಚಾರ್ಯರು ಐದು ಮಹಾಸೂತ್ರಗಳನ್ನು ಬೋದಿಸಿದ್ದಾರೆ. ಜಗತ್ತಿನ ಆದ್ಯ ಸೂತ್ರಗಳಾದ ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ, ಪಂಚವರ್ಣ ಸೂತ್ರಗಳ ಮೂಲಕ ಜೀವಾತ್ಮ, ಪರಮಾತ್ಮ, ಜಗತ್ತು, ಬಂಧ ಮತ್ತು ಮೋಕ್ಷದ ಕುರಿತು ದಾರ್ಶನಿಕ ವಿಚಾರಗಳನ್ನು ತಿಳಿಸಿದ್ದಾರೆ. ಆ ಸೂತ್ರಗಳ ವ್ಯಾಖ್ಯಾನ ಗ್ರಂಥವೇ ವೀರಶೈವ ಪಂಚಸೂತ್ರಾಣಿ ಎಂದು ವಿವರಿಸಿದರು ಸಮಾರಂಭದಲ್ಲಿ ವಿಭೂತಿಪುರ ವೀರಸಿಂಹಾಸನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಗಾನಸುಧೆ ಸಂಸ್ಥೆಯ ಶಿವಶಂಕರ ಶಾಸಿಗಳು, ಸಂಘಟನೆಯ ಅಧ್ಯಕ್ಷ ಆರ್.ಬಿ.ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಮಾಗಡಿ ಮುಖ್ಯ ರಸ್ತೆಯಿಂದ ಕಾಶೀ ಜಗದ್ಗುರುಗಳ ಸಾರೋಟು ಮೆರವಣಿಗೆಯು ವೈಭವದಿಂದ ನಡೆಯಿತು. ವೀರಗಾಸೆ, ತಮಟೆ ಮತ್ತಿತರ ಮಂಗಳವಾದ್ಯಗಳು ಮೆರವಣಿಗೆಗೆ ಮೆರಗು ತಂದವು.

ಬುಧವಾರ ವೀರಶೈವ ಪಂಚಸೂತ್ರಾಣಿ ಕೃತಿ ಬಿಡುಗಡೆ

ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಆಯೋಜಿಸಿರುವ 3ನೇ ದಿನದ ಕಾರ್ಯಕ್ರಮದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳ ಸಂಗೀತ ರುದ್ರ ಸಹಿತ ಇಷ್ಟಲಿಂಗ ಮಹಾಪೂಜೆ ನಡೆಯಲಿದ್ದು, ಸಂಜೆ 6 ಗಂಟೆಗೆ ‘ವೀರಶೈವ ಪಂಚಸೂತ್ರಾಣಿ’ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ. ಶ್ರೀ ಉಜ್ಜಯಿನಿ, ಶ್ರೀಶೈಲ ಮತ್ತು ಕಾಶೀ ಉಭಯ ಜಗದ್ಗುಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.