ಜಿಲ್ಲೆ

ಸುಸ್ಥಿರ ಅಭಿವೃದ್ಧಿ ಈಗಿನ ಜಾಗತಿಕ ಸವಾಲು

ಮಂಜುನಾಥ ತಿಮ್ಮಯ್ಯ

ಮೈಸೂರು: ಎಲ್ಲ ಕ್ಷೇತ್ರಗಳ ಬೆಳವಣಿಗೆಗಳು ಸುಸ್ಥಿರ ಅಭಿವೃದ್ಧಿಯಡಿ ಸಾಗಬೇಕು. ಅದುವೇ ಪರಿಸರಸ್ನೇಹಿಯಾಗಿ ಒಟ್ಟೊಟ್ಟಿಗೆ ಹೆಜ್ಜೆ ಹಾಕಬೇಕು ಎಂದು ನಿವೃತ್ತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸುಸ್ಥಿರ ಅಭಿವೃದ್ಧಿ ಮತ್ತು ನಿರ್ವಹಣಾಶಾಸ್ತ್ರದ ನಾವೀನ್ಯ ಅನುಸರಣಿಗಳು’ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸುಸ್ಥಿರ ಅಭಿವೃದ್ಧಿ ಈಗಿನ ಜಾಗತಿಕ ಸವಾಲು. ತ್ವರಿತಗತಿಯಲ್ಲಿ ಜಗತ್ತು ಅಭಿವೃದ್ಧಿಯತ್ತ ಮುಖ ಮಾಡಿದೆ. ಹೊಸ ಕ್ರಿಯಾ ಯೋಜನೆಗಳಲ್ಲಿ ಸುಸ್ಥಿರ ಅಭಿವೃದ್ಧಿಯಲ್ಲಿ ಅನ್ವೇಷಣೆ ಬಹಳ ಮುಖ್ಯವಾಗಿದೆ. ನೈತಿಕತೆಯ ಬುನಾದಿಯ ಮೇಲೆ ಪ್ರಗತಿಯ ದಾಪುಗಾಲು ಹಾಕಬೇಕು ಎಂದರು.


ನವಪ್ರಗತಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆ, ವಿವಿಧ ರೀತಿಯ ಮಾಲಿನ್ಯ, ಅರಣ್ಯನಾಶ, ನೈಸರ್ಗಿಕ ಸಂಪನ್ಮೂಲಗಳಿಗೆ ಹಾನಿಗೂ ಕಾರಣವಾಗುತ್ತಿದೆ.

ಇದನ್ನು ತಪ್ಪಿಸಬೇಕು. ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಯೋಜನೆಗಳನ್ನು ಮರು ರೂಪಿಸುವುದು ಈಗಿನ ಅಗತ್ಯವಾಗಿದೆ. ಅದಕ್ಕಾಗಿ ದೀರ್ಘಕಾಲಿನ, ಸಮಸ್ಯೆಗೆ ಪರಿಹಾರಾತ್ಮಕ, ಇಂಧನ ಬಳಕೆ ತಗ್ಗಿಸುವ, ಪರಿಸರಸ್ನೇಹಿ, ಬಳಕೆ ಸಾಮರ್ಥ್ಯ ವೃದ್ಧಿಸುವ ಮತ್ತು ಸಮಾಜಕ್ಕೆ ಅನುಕೂಲಕರವಾಗಿರುವ ಸುಸ್ಥಿರ ಅಭಿವೃದ್ಧಿಯತ್ತ ಮನುಕುಲ ಸಾಗಬೇಕಿದೆ ಎಂದರು.


ಮರುಬಳಕೆ, ಮರುವಿನ್ಯಾಸ, ಮರು ಉತ್ಪಾದನೆಗೆ ಸುಸ್ಥಿರ ಅಭಿವೃದ್ಧಿ ಪೂರಕವಾಗಿಬೇಕು. ಪರಿಸರ ಹಾನಿಯ ಪ್ರಮಾಣವನ್ನು ತಗ್ಗಿಸಬೇಕು. ಇದುವೇ ಇಂಗಾಲ ಡೈ ಆಕ್ಸೈಡ್ ಮುಕ್ತವಾಗಿರಬೇಕು ಎಂದರು.


ಈಗ ರಾಸಾಯಿನಿಕಯುಕ್ತ ಆಹಾರ ಪದಾರ್ಥ ಸೇವನೆಯೇ ಹೆಚ್ಚು. ಇದು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಮನುಕುಲದ ಮೇಲೆ ಊಹಿಸಲಾಗದಷ್ಟು ದುಷ್ಪರಿಣಾಮವನ್ನೂ ಬೀರುತ್ತಿದೆ. ಆದ್ದರಿಂದಲೇ ಆಹಾರ ಉತ್ಪಾದನೆಯಲ್ಲಿ ಸುಸ್ಥಿರ ಅಭಿವೃದ್ಧಿ ಆರೋಗ್ಯಪೂರ್ಣವಾಗಿರಬೇಕು ಎಂದರು.


ಪ್ರಗತಿಯ ಉತ್ತುಂಗದಲ್ಲಿರುವ ಅಮೆರಿಕದಲ್ಲೂ ಸುಸ್ಥಿರ ಅಭಿವೃದ್ಧಿಯನ್ನು ಅಲ್ಲಿಯ ಪ್ರತಿಯೊಬ್ಬರು ಅಳವಡಿಕೆ ಮಾಡಿಕೊಂಡಿದ್ದಾರೆ. ಬಡತನ-ಹಸಿವು ಮುಕ್ತ ಗುಣಮಟ್ಟದ ಆರೋಗ್ಯ ಜೀವನಕ್ಕಾಗಿ ಏಳು ಸೂತ್ರಗಳನ್ನು ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ. ಅದು ಭಾರತ ಸೇರಿದಂತೆ ಇತರ ದೇಶದಲ್ಲೂ ಅನುಷ್ಠಾನಕ್ಕೆ ಬರಬೇಕು ಎಂದು ಕಿವಿಮಾತು ಹೇಳಿದರು.


ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಎಂ.ಎಸ್.ಸುಭಾಷ್, ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ಮೈಸೂರು ಮುಖ್ಯಸ್ಥ ವಿನಾಯಕ್ ಹೆಗ್ಡೆ, ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಡೀನ್(ಶೈಕ್ಷಣಿಕ) ಪ್ರೊ.ಎನ್.ಲಕ್ಷ್ಮೀ, ನಿರ್ವಹಣಾಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ಪಿ.ಸವಿತಾ ಇದ್ದರು.