ಜಿಲ್ಲೆ

ಸಹ ಶಿಕ್ಷಕ ಅಮಾನತು

ಪ್ರಸಿನ್ ಕೆ.ಆರ್

ಹನೂರು: ಮಹಿಳೆಯ ಜತೆ ಅನುಚಿತ ವರ್ತನೆ ಆರೋಪದ ಮೇಲೆ ಕುರುಬರದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವೆಂಕಟನಾರಾಯಣ (ನಿಯೋಜನೆ ಉರ್ದು ಕಿರಿಯ ಪ್ರಾಥಮಿಕ ಶಾಲೆ) ಅವರನ್ನು ಅಮಾನತುಗೊಳಿಸಲಾಗಿದೆ.

ಬಸಪ್ಪನದೊಡ್ಡಿ ಗ್ರಾಮ ಸಮೀಪದ ದಾಸನದೊಡ್ಡಿ ಗ್ರಾಮದ ಭಾಗ್ಯ ಎಂಬುವರ ಪುತ್ರ ಮಾದೇವ ಅಂಗವಿಕಲನಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ. ನ.8 ರಂದು ಶಾಲೆಯಲ್ಲಿ ಅಂಗವಿಕಲ ಮಕ್ಕಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಭಾಗ್ಯ ಅವರು ಶಾಲೆಗೆ ತೆರಳಿದ್ದರು. ಈ ವೇಳೆ ಇಲ್ಲಿನ ಮುಖ್ಯ ಶಿಕ್ಷಕರು ಸಮೀಪದ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳುವಂತೆ ತಿಳಿಸಿದ್ದರು. ಅಲ್ಲಿಗೆ ತೆರಳಿದ ಭಾಗ್ಯ ಆಹಾರ ಪದಾರ್ಥಗಳನ್ನು ನೀಡುವಂತೆ ಶಿಕ್ಷಕ ವೆಂಕಟನಾರಾಯಣ ಅವರನ್ನು ಕೇಳಿದ್ದಾರೆ. ಈ ಸಂದರ್ಭ ವೆಂಕಟನಾರಾಯಣ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ತಿಳಿದ ಸ್ಥಳೀಯರು ಶಿಕ್ಷಕನಿಗೆ ಥಳಿಸಿದ್ದ ಪ್ರಕರಣ ಕೂಡ ನಡೆದಿತ್ತು. ನ.11ರಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ಭಾಗ್ಯ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ಬಿಇಒ ಗುರುಲಿಂಗಯ್ಯ ಅವರು ವೆಂಕಟನಾರಾಯಣ ಅವರನ್ನು ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ.