ಜಿಲ್ಲೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಆದೇಶಕ್ಕೆ ತಡೆ

ಸುಳ್ಯ: ಕಳೆದ ವಾರವಷ್ಟೇ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ರಾಧಾಕೃಷ್ಣ ಬೊಳ್ಳೂರು ಅವರ ನೇಮಕವನ್ನು ಕೆಪಿಸಿಸಿ ತಾತ್ಕಾಲಿಕವಾಗಿ ತಡೆಹಿಡಿದಿರುವ ಬಗ್ಗೆ ಪಕ್ಷದ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಧಾಕೃಷ್ಣ ಬೊಳ್ಳೂರು ಅವರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿ ಡಿ.ಕೆ.ಶಿವಕುಮಾರ್ ಹೊರಡಿಸಿದ ಆದೇಶವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬೊಳ್ಳೂರು ಅವರಿಗೆ ನೀಡಿದ್ದರು. ಫೆ.24ರಂದು ಪದಗ್ರಗಣ ಸಮಾರಂಭ ನಡೆಯಲಿದ್ದು ಹಲವು ಮುಖಂಡರು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಂದು ಸ್ವತಃ ರಾಧಾಕೃಷ್ಣ ಬೊಳ್ಳೂರು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದರು. ಆದರೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಕ್ಕೆ ತೀವ್ರ ಅಸಮಾಧಾನಗೊಂಡ ಕೆಲವು ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಲ್ಲಿಗೆ ಹೋಗಿ ಆ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಧಾಕೃಷ್ಣ ಬೊಳ್ಳೂರು ಅವರ ನೇಮಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ತಡೆಹಿಡಿದು ಆದೇಶ ನೀಡಿದ್ದಾರೆ.

ರಾಧಾಕೃಷ್ಣ ಬೊಳ್ಳೂರು ಅವರ ಏಳಿಗೆ ಅರಗಿಸಿಕೊಳ್ಳದ, ಪಕ್ಷದ ಸಂಘಟನೆಯಲ್ಲಿ ಇರದ ಬೆರೆಳೆಣಿಕೆಯ ನಾಯಕರು ಸದ್ಯ ಸುಳ್ಳು ಆರೋಪ ಮಾಡಿ ತಡೆ ತಂದಿರುವುದು ಖಂಡನೀಯ ಎಂದು ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷ ಸಚಿನ್‌ರಾಜ್ ಶೆಟ್ಟಿ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿಗೆ ಸುಳ್ಯದ ಸತ್ಯಾಂಶ ತಿಳಿಸುವ ಉದ್ದೇಶದಿಂದ ಕಾರ್ಯಕರ್ತರಿಂದ ಪೋಸ್ಟ್‌ಕಾರ್ಡ್ ಚಳುವಳಿ ನಡೆಸಲಾಗುವುದೆಂದು ಸಚಿನ್ ತಿಳಿಸಿದ್ದಾರೆ.