ಬಬಲೇಶ್ವರ ಪಟ್ಟಣದ ಶಾಂತವೀರ ವೃತ್ತಕ್ಕೆ ಆಗಮಿಸಿದ ಸಮಾಜದ ಮುಖಂಡರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಬಬಲೇಶ್ವರ ತಹಸೀಲ್ದಾರ್​ ಸಂತೋಷ ಮ್ಯಾಗೇರಿಯವರಿಗೆ ಮನವಿ ಸಲ್ಲಿಸಿದರು. ಡಾ. ಮಹಾದೇವ ಶಿವಾಚಾರ್ಯರು, ವಿಜುಗೌಡ ಎಸ್​. ಪಾಟೀಲ, ವಿ.ಎಸ್​. ಪಾಟೀಲ, ಸುರೇಶ ಬಿರಾದಾರ ಇತರರಿದ್ದರು. 
ಜಿಲ್ಲೆ

ಲಾಠಿ ಚಾರ್ಜ್​ಗೆ ಕಾರಣರಾದವರನ್ನು ಅಮಾನತುಮಾಡಿ

ಗಿರೀಶ ಸಗರ

ಬಬಲೇಶ್ವರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಕಾರರ ಮೇಲೆ ಹೋರಾಟ ಹತ್ತಿಕ್ಕಲು ಪೊಲೀಸರು ಲಾಠಿಚಾರ್ಜ್​ ನಡೆಸಿದ್ದನ್ನು ಖಂಡಿಸಿ ಸರ್ಕಾರದ ವಿರುದ್ಧ ಗುರುವಾರ ಬಬಲೇಶ್ವರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿದರು.

ಬಬಲೇಶ್ವರ ಬೃಹನ್ಮಠದ ಪೀಠಾಧಿಪತಿ ಹಾಗೂ ಪಂಚಮಸಾಲಿ ಆಲಗೂರು ಪೀಠದ ಮೂರನೇ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರ ನೇತೃತ್ತದಲ್ಲಿ ನಗರದ ಗುರುಪಾದೇಶ್ವರ ಮಠದಿಂದ ಶಾಂತವೀರ ವೃತ್ತಕ್ಕೆ ಆಗಮಿಸಿದ ಸಮಾಜದ ಮುಖಂಡರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಹೆದ್ದಾರಿ ಬಂದ್​ ಮಾಡಿ ಟಯರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಬಬಲೇಶ್ವರ ತಹಸೀಲ್ದಾರ್​ ಸಂತೋಷ ಮ್ಯಾಗೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ಮೆರವಣಿಗೆಯಲ್ಲಿ ಸರ್ಕಾರದ ವಿರುದ್ಧ ೂಷಣೆ ಕೂಗಲಾಯಿತು. ಸರ್ಕಾರದ ಹಿಟ್ಲರ್​ ಮಾದರಿ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಡಾ. ಮಹಾದೇವ ಶಿವಾಚಾರ್ಯರು ಮಾತನಾಡಿ, ಹೋರಾಟದ ಸಮಯದಲ್ಲಿ ಪ್ರತಿಭಟನೆಕಾರರ ಮೇಲೆ ವಿನಾಕಾರಣ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಲಾಠಿ ಚಾರ್ಜ್​ ಮಾಡಲು ಕಾರಣರಾದ ಎಡಿಜಿಪಿ, ಎಸ್​ಪಿ, ಡಿಸಿ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಸಂವಿಧಾನಬದ್ಧ ಪ್ರತಿಭಟನೆ ಹಕ್ಕನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ನ್ಯಾಯಯುತ ಬೇಡಿಕೆ ಈಡೇರಿಸುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ದೌರ್ಜನ್ಯ ಎಸಗಿರುವುದು ಖಂಡನೀಯ. ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಪಂಚಮಸಾಲಿ ಸಮಾಜದಲ್ಲಿ ಮೆ ಕೇಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ವಿಜುಗೌಡ ಎಸ್​. ಪಾಟೀಲ ಮಾತನಾಡಿ, ಶಾಂತಿಯುತ ಪಂಚಮಸಾಲಿ ಮೀಸಲಾತಿ ಹೋರಾಟದ ಮೇಲೆ ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ಮುಂಚೆನೂ ಸಿಎಂ ಆಗಿದ್ದಾಗ ಲಿಂಗಾಯತ ಸಮಾಜದ ವಿರುದ್ಧ ಸಿದ್ದರಾಮಯ್ಯ ಅವರು ಒಡೆದಾಳುವ ನೀತಿ ಅನುಸರಿಸಿದ್ದರು. ಇಂದು ಶಾಂತಿಯುತವಾಗಿ ಧರಣಿ ನಡೆಯುತ್ತಿರುವಾಗ ಪೊಲೀಸರನ್ನು ಛೂ ಬಿಟ್ಟಿದ್ದೀರಿ. ಸಿದ್ದರಾಮಯ್ಯ ಅವರೇ ನಿಮಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಲ್ಲವೇ? ಎಂದು ಪ್ರಶ್ನಿಸಿದರು.

ಪಂಚಮಸಾಲಿ ಸಮಾಜದ ಮುಖಂಡ ಹಾಗೂ ಬಿಎಲ್​ಡಿಇ ಸಂಸ್ಥೆಯ ನಿರ್ದೇಶಕ ವಿ.ಎಸ್​. ಪಾಟೀಲ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ ಬಿರಾದಾರ ಮಾತನಾಡಿದರು.

ಚನ್ನಪ್ಪ ಕೊಪ್ಪದ್​, ಈರಣ್ಣ ಶಿರಮಗೊಂಡ, ಉಮೇಶ ಕೋಳಕೂರ, ಅರ್ಜುನ್​ ಬಳ್ಳೂರು, ಬಸವರಾಜ ಕುರವಿನಶೆಟ್ಟಿ, ಮಲ್ಲು ಕಣ್ಣೂರ, ಸಂಗಪ್ಪ ತಮಗೊಂಡ, ಬಾಪುರಾಜ ಯಾದವಾಡ, ಈರಗೌಡ ಬಿರಾದಾರ, ಶಿವಪುತ್ರ ಪೂಜಾರಿ, ಬಿ.ಜಿ. ಬಿರಾದಾರ ಇತರರಿದ್ದರು.