ಜಿಲ್ಲೆ

ಪಾಲಿಕೆ ಅದಾಲತ್ ಸ್ಥಗಿತಗೊಳಿಸಿ: ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಒತ್ತಾಯ

ಮೈಸೂರು: ನಗರ ಪಾಲಿಕೆ ಆಯೋಜಿಸಿರುವ ‘ಪಾಲಿಕೆ ಅದಾಲತ್’ ಸಾರ್ವಜನಿಕರಿಗೆ ಕಿರುಕುಳ ನೀಡುವ ಕಾರ್ಯವಾಗಿದ್ದು, ಇದಕ್ಕೆ ನನ್ನ ವಿರೋಧವಿದೆ. ಅದಾಲತ್ ನಿಲ್ಲಿಸಬೇಕು ಎಂದು ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಒತ್ತಾಯಿಸಿದರು.
ಮೈಸೂರು ನಗರ ಪಾಲಿಕೆಯು ಅದಾಲತ್ ಆಯೋಜಿಸುವುದು ಬೇಕಿತ್ತಾ? ಪಾಲಿಕೆಯಲ್ಲಿ ಯಾವುದೇ ಕೆಲಸಕ್ಕೂ ಅರ್ಜಿ ನೀಡುತ್ತೇವೆ. ಅರ್ಜಿ ನೀಡಿದ ಮೇಲೆ ಅಧಿಕಾರಿಗಳು ಆ ಕೆಲಸ ಮಾಡಬೇಕು. ಅದಾಲತ್ ನಡೆಸಲು ಪಾಲಿಕೆ ಏನು ನ್ಯಾಯಾಲಯ ಅಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಖಾತೆ, ಕಂದಾಯ, ಬರ್ತ್ ಸರ್ಟಿಫಿಕೇಟ್, ಡೆತ್ ಸರ್ಟಿಫಿಕೇಟ್, ನಕ್ಷೆಗಾಗಿ ಪಾಲಿಕೆಗೆ ಅರ್ಜಿ ಸಲ್ಲಿಸುತ್ತೇವೆ. ಆದ್ದರಿಂದ, ನಿಗದಿತ ಸಮಯದಲ್ಲಿ ಅರ್ಜಿ ವಿಲೇವಾರಿ ಮಾಡಬೇಕಾಗಿರುವುದು, ಸಾರ್ವಜನಿಕರಿಗೆ ನೆರವಾಗಬೇಕಾದ ಧರ್ಮ ಪಾಲಿಕೆ ಅಧಿಕಾರಿಗಳದು. ಆದರೆ ಡೆತ್ ಸರ್ಟಿಫಿಕೇಟ್ ನೀಡಲು ಅದಾಲತ್ ಮಾಡುತ್ತೇವೆ ಎನ್ನುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.


ಗಂಡನಿಂದ ಹೆಂಡತಿ ಹೆಸರಿಗೆ ಖಾತೆ ವರ್ಗ ಮಾಡಲು ಪಾಲಿಕೆ ಅಧಿಕಾರಿಗಳು 8 ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ಕೇಳಿದರೆ ಸರ್ವರ್ ಸಮಸ್ಯೆ ಎನ್ನುತ್ತಾರೆ. ಅದಾಲತ್ ನಡೆಸಿದರೂ ಅನೇಕ ಖಾತೆ ವರ್ಗ ಸಮಸ್ಯೆಯನ್ನು ಬಗೆಹರಿಸಲು ಆಗಿಲ್ಲ ಎಂದು ದೂರಿದರು.
ಆಯುಕ್ತರು ಮತ್ತು ಮೇಯರ್ ಪ್ರತಿ ವಾರ ಒಂದೊಂದು ವಲಯ ಕಚೇರಿಗೆ ಹೋಗಬೇಕು. ಅಲ್ಲಿ ಖಾತೆ, ಕಂದಾಯ ಸೇರಿದಂತೆ ಸಾರ್ವಜನಿಕರ ಅರ್ಜಿಗಳ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪರಿಶೀಲಿಸಬೇಕು ಎಂದರು.


ಒಂದು ಖಾತೆ ಮಾಡಲು ಐದು ಜನ ಹೆಬ್ಬೆಟ್ಟು ಬೇಕು. ಮೊದಲ ಆರ್‌ಐ ಒಬ್ಬರು ಇದ್ದರೆ ಸಾಕಿತ್ತು. ಆದರೆ, ಈಗ ಐದು ಜನ ಮಾಡಿರುವ ಕಾರಣ ಆರ್‌ಐ ಬಂದರೆ ಸೂಪರಿಂಟೆಂಡೆಂಟ್ ಬರಲ್ಲ, ಸೂಪರಿಂಟೆಂಡೆಂಟ್ ಬಂದರೆ ಕಂದಾಯ ಅಧಿಕಾರಿ ಬರುತ್ತಿಲ್ಲ. ಹೀಗಾಗಿ, ಖಾತೆ, ಕಂದಾಯ ಕೆಲಸಗಳು ತಡವಾಗುತ್ತಿವೆ ಎಂದರು.
ಮುಖಂಡರಾದ ವಾಸು, ವೆಂಕಟೇಶ್ ಇದ್ದರು.