ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ಕೊಡಿಗೇಹಳ್ಳಿ ಪ್ರಾಥಮಿಕ ಶಾಲೆಗೆ ಮಕ್ಕಳ ಆಯೋಗದ ಸದಸ್ಯರ ತಂಡ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಂದ ಶಾಲೆಯ ಸ್ವಚ್ಛತಾ ಕಾರ್ಯ ಮಾಡಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಶಾಲಾ ಮುಖ್ಯಶಿಕ್ಷಕ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ತಂಡ ಮಕ್ಕಳಿಗೆ ಕೆಲಸ ಮಾಡುವಂತೆ ಹೇಳಿದ ಮುಖ್ಯ ಶಿಕ್ಷಕನ ಸಸ್ಪೆಂಡ್‌ಗೆ ಕ್ರಮವಹಿಸಲು ತಾಲೂಕು ಮಟ್ಟದ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ವಿವಿಧ ಆಸ್ಪತ್ರೆ , ಶಾಲೆ, ಗ್ರಾಪಂ, ಪೊಲೀಸ್ ಠಾಣೆಗೆ ಶುಕ್ರವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ.ಟಿ ತಿಪ್ಪೇಸ್ವಾಮಿ, ಶೇಖರಗೌಡ ರಾಮತ್ನಾಳ, ಶಶಿಧರ್ ಕೋಸಂಬೆ ತಂಡ ಭೇಟಿ ನೀಡಿ ಪರಿಶೀಲಿಸಿತು. ಇದೇ ವೇಳೆ ಶಾಲೆಯಲ್ಲಿ ಬಿಸಿಯೂಟ ಯೋಜನೆಯ ಬೇಳೆ ಪರಿಶೀಲಿಸಿ ಗುಣಮಟ್ಟ ಸರಿಯಿಲ್ಲ ಎಂಬುದು ತಿಳಿದು ಗುಣಮಟ್ಟದ ಬೇಳೆ ಪೂರೈಸುವಂತೆ ಇಲಾಖೆಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಸಿಬ್ಬಂದಿಗೆ ಚಿಕಿತ್ಸೆ: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಆಯೋಗದ ಸದಸ್ಯರು ಅಪೌಷ್ಟಿಕ ಮಕ್ಕಳ ವಾರ್ಡ್‌ಗೆ ಭೇಟಿ ನೀಡಿದರು. ಜಿಲ್ಲೆಯಲ್ಲಿ 45 ಮಕ್ಕಳಿದ್ದರೂ ಯಾವ ಮಕ್ಕಳಿಗೂ ಏಕೆ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರ್‌ಸಿಎಚ್‌ಒ ಅಧಿಕಾರಿಗಳಿಗೆ ಪ್ರಶ್ನಿಸಿದರು. ಇಲ್ಲಿನ ಅಪೌಷ್ಟಿಕ ಮಕ್ಕಳ ಅಡುಗೆ ಮನೆ ಸೌಲಭ್ಯ ಸಮರ್ಪಕವಾಗಿಲ್ಲದಿರುವುದರ ಬಗ್ಗೆ ಗಮನಿಸಿದ ತಂಡ ಅಗತ್ಯ ಕ್ರಮವಹಿಸಲು ಸೂಚಿಸಿದರು. ಜತೆಗೆ ಆಸ್ಪತ್ರೆಯಲ್ಲಿ ಪಥ್ಯ ಆಹಾರ ನೀಡದ ಬಗ್ಗೆ ಗಮನಿಸಿದ ಆಯೋಗದ ಸದಸ್ಯರು ಕೂಡಲೇ ಈ ಬಗ್ಗೆ ಕ್ರಮವಹಿಸಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಆಧಾರ್ ವಯಸ್ಸಿನ ದಾಖಲಾತಿ ಆಗಲ್ಲ. ತಾಯಿ ಕಾರ್ಡ್ ನೀಡುವಾಗಲೇ ವಯಸ್ಸಿನ ದಾಖಲಾತಿಗಳಾದ ಶಾಲಾ ದಾಖಲಾತಿ, ಜನನ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು. ಜತೆಗೆ ಸಖಿ ಒನ್ ಸೆಂಟರ್‌ನಲ್ಲಿರುವ ಶಿಶು ಪಾಲನಾ ಕೇಂದ್ರವನ್ನು ಕೂಡಲೇ ಸ್ಥಳಾಂತರಿಸಲು ಸೂಚನೆ ನೀಡಿದರು.
15 ದಿನದೊಳಗೆ ಕ್ರಮವಹಿಸಿ: ಮಾದಗೊಂಡನಹಳ್ಳಿಯಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಕಾಮಗಾರಿ ಪೂರ್ಣಗೊಂಡಿದ್ದರು ಮಕ್ಕಳ ಬಳಕೆಗೆ ನೀಡಿಲ್ಲ. ಇದರ ಬಗ್ಗೆ ತಾಲೂಕು ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. 15 ದಿನದೊಳಗೆ ಈ ಬಗ್ಗೆ ಕ್ರಮವಹಿಸಲು ಸೂಚನೆ ನೀಡಿದರು. ದೊಡ್ಡಬೆಳವಂಗಲ ಕೆಪಿಎಸ್ ಶಾಲೆಗೆ ಭೇಟಿ ನೀಡಿದ ಸದಸ್ಯ ಡಾ. ಕೆ.ಟಿ ತಿಪ್ಪೇಸ್ವಾಮಿ ಶಾಲೆಯಲ್ಲಿ ಹೆಚ್ಚು ದಿನಗಳ ಕಾಲಗಳ ರಜೆ ಹಾಕಿದ ಮಕ್ಕಳನ್ನು ಶಾಲೆಗೆ ಕರೆತರಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು. ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಶಾಲೆ, ಆಸ್ಪತ್ರೆ, ಪೊಲೀಸ್ ಠಾಣೆ ಸೇರಿ ಎಲ್ಲ ಕಡೆಗಳಲ್ಲೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಮಕ್ಕಳ ಆಯೋಗದ ಸದಸ್ಯರು ಸೂಚನೆ ನೀಡಿದರು.