ಶಿವಮೊಗ್ಗ: ಮಂಗಳೂರಿನ ಕುಕ್ಕರ್ ಸ್ಫೋಟ ಮತ್ತು ಶಿವಮೊಗ್ಗದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದ ಶಂಕಿತ ಉಗ್ರನನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಗುರುವಾರ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ತೀರ್ಥಹಳ್ಳಿಯ ಇಂದಿರಾನಗರದ ಆರಾಫತ್ ಅಲಿ ಸಿಕ್ಕಿಬಿದ್ದವನು. ಕೀನ್ಯಾದ ನೈರೋಬಿಯಿಂದ ಬಂದ ಆರಾಫತ್ ಅಲಿಯನ್ನು ಎನ್‌ಐಎ ವಶಕ್ಕೆ ಪಡೆದಿದೆ. ಐಸಿಸ್ ಮತ್ತು ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದನೆ, ಹಣದ ಸಹಾಯ ನೀಡುತ್ತಿದ್ದ ಆರೋಪದ ಮೇಲೆ ಈತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಕರ್ನಾಟಕದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜತೆಗೆ ಆರಾಫತ್ ಅಲಿ 2020ರಲ್ಲೇ ಭಾರತದಿಂದ ನಾಪತ್ತೆಯಾಗಿದ್ದ. ಅಂದಿನಿಂದಲೂ ಕರ್ನಾಟಕದ ಉಗ್ರ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತಿರುವ ಶಂಕೆ ಈತನ ಮೇಲಿದ್ದು ವಿದೇಶಗಳಲ್ಲಿ ಕುಳಿತು ಕ್ರಿಪ್ಟೋ ಕರೆನ್ಸಿ ಮೂಲಕ ಕರ್ನಾಟಕದಲ್ಲಿನ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ಆರೋಪ ಎದುರಿಸುತ್ತಿದ್ದ. ಕದ್ರಿ ಗೋಡೆ ಬರಹ ಪ್ರಕರಣದ ಪ್ರಮುಖ ಆರೋಪಿಗಳಾದ ಶಾರಿಕ್ ಹಾಗೂ ಹಾಗೂ ಮಾಜ್ ಮುನೀರ್‌ಗೆ ಈತನೇ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ನೆರವು ನೀಡುತ್ತಿದ್ದ. ಇದೇ ಶಾರಿಕ್ ಹಾಗೂ ಮಾಜ್ ಮುನೀರ್ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು. ಆಗಲೂ ಇವರಿಗೆ ವಿದೇಶದಿಂದ ಹಣಕಾಸಿನ ನೆರವು ಒದಗಿಸಿದ್ದ. ಬಳಿಕ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ನಲ್ಲಿ ಶಾರಿಕ್ ಸಿಕ್ಕಿ ಬಿದ್ದಿದ್ದ.
2019ರಲ್ಲಿ ತೀರ್ಥಹಳ್ಳಿ ತೊರೆದು ಬೆಂಗಳೂರಿಗೆ ಹೋಗಿದ್ದ ಆರಾಫತ್ ಅಲಿ, ಅಲ್ಲಿಯೇ ಇಂಜಿನಿಯರಿಂಗ್ ಮಾಡಿದ್ದ. 2020ರ ನ.2ರಂದು ಮಂಗಳೂರು ಗೋಡೆ ಬರಹ ಪ್ರಕರಣಕ್ಕೆ ಪ್ರಚೋದನೆ ನೀಡಿದ್ದ ಆರೋಪ ಈತನ ಮೇಲಿದೆ. ಅಲ್ಲದೆ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಆರೋಪಿಗಳ ಜತೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ದುಬೈನ ಪರ್ಫ್ಯೂಮ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ ಬಳಿಕ ನಾಪತ್ತೆಯಾಗಿದ್ದ. 2020ರಿಂದಲೂ ತಲೆಮರೆಸಿಕೊಂಡಿದ್ದ. ಇದೀಗ ಕೀನ್ಯಾದ ನೈರೋಬಿಯಿಂದ ಬಂದ ವೇಳೆ ಆರಾಫತ್ ಅಲಿ ಎನ್‌ಐಎ ವಶಕ್ಕೆ ಪಡೆದಿದೆ.