ಶೃಂಗೇರಿ: ಬಂಧಿತ ಶಂಕಿತ ನಕ್ಸಲ್ ಶ್ರೀಮತಿ (ಉನ್ನಿಯಮ್ಮ) ಅವರನ್ನು ಶುಕ್ರವಾರ ಪೊಲೀಸರು ಜೆಎಂಎ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಶನಿವಾರ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಘಟನಾ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಲಾಯಿತು. ಕೇರಳದಿಂದ ಬಾಡಿ ವಾರೆಂಟ್ ಮೇಲೆ ಶ್ರೀಮತಿ ಅವರನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಕರೆತರಲಾಯಿತು. ಶ್ರೀಮತಿ ಈ ಹಿಂದೆ ನಡೆದಿದ್ದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಆರೋಪವಿದೆ. ತಾಲೂಕಿನ ಕಿಗ್ಗಾ ನಟೇಶ್ ಮನೆಗೆ ದಾಳಿ ಮಾಡಿದ ಸಂದರ್ಭದಲ್ಲಿ, ಸುಂಕದಮಕ್ಕಿ ಕೃಷ್ಣಮೂರ್ತಿ ಮನೆಗೆ ಭೇಟಿ ನೀಡಿ ಬೆದರಿಕೆ ಹಾಕಿದ್ದು, ಕಿಗ್ಗಾ ಗಂಗಾಧರ ಶೆಟ್ಟಿ ಮನೆಗೆ ಭೇಟಿ ನೀಡಿ ಬೆದರಿಕೆ ಹಾಕಿರುವುದು, ಮಾತೊಳ್ಳಿ ಸತೀಶ್ ಮನೆಯಲ್ಲಿ ದರೋಡೆ, ಯಡದಾಳು ಗ್ರಾಮದಲ್ಲಿ ಪೊಲೀಸರೊಂದಿಗೆ ಗುಂಡಿನ ಚಕಮಕಿ, ತಾರೊಳ್ಳಿಕೊಡಿಗೆ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ, ಹಾದಿ ಮಾರ್ಗದಲ್ಲಿ ಪೊಲೀಸರ ಮೇಲೆ ದಾಳಿ ಯತ್ನ, ಕೆರೆಕಟ್ಟೆ ಶೀರ್ಲು ಗಿರಿಜನ ಮುಖಂಡ ಕೆಂಪಣ್ಣ ಮನೆಯಲ್ಲಿ ಬೈಕ್ ಸುಟ್ಟ ಪ್ರಕರಣ ಹಾಗೂ ತನಿಕೋಡು ಅರಣ್ಯ ಇಲಾಖೆ ಕಚೇರಿ ಧ್ವಂಸ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. 2007ರಿಂದ ನಾಪತ್ತೆಯಾಗಿದ್ದ ಶ್ರೀಮತಿ ಅವರನ್ನು 2023ರ ನವೆಂಬರ್‌ನಲ್ಲಿ ಕೇರಳದ ಕಣ್ಣೂರಿನಲ್ಲಿ ಪೊಲೀಸರು ಬಂಧಿಸಿದ್ದರು.