ಜಿಲ್ಲೆ

ಮೂಲಸೌಲಭ್ಯ ವಂಚಿತ ಸೂರ್ಯನಗರ: ಎರಡನೇ ಹಂತದಲ್ಲಿ ಕುಡುಕರ ಕಾಟ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ (ಕೆಎಚ್​ಬಿ) ಅಭಿವೃದ್ಧಿಪಡಿಸಿರುವ ಸೂರ್ಯನಗರ ಬಡಾವಣೆ ಎರಡನೇ ಹಂತ ಮೂಲಸೌಕರ್ಯ ಕೊರತೆಯಿಂದ ನಲುಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಎಚ್​ಬಿಗೆ ಪತ್ರ ಬರೆದರೂ ಸಮಸ್ಯೆಗಳಿಗೆ ಮುಕ್ತಿ ಸಿಗದೆ ನಿವಾಸಿಗಳು ಪರದಾಡುತ್ತಿದ್ದಾರೆ.

ಪ್ರತಿ ತಿಂಗಳು ಕೆಎಚ್​ಬಿನಿಂದ ಮನೆಗಳಿಗೆ ಟ್ಯಾಂಕರ್​ ನೀರು ಪೂರೈಸುತ್ತಿದೆ. ಆದರೆ, ಮನೆಗಳಲ್ಲಿ ವಾಟರ್​ ಮೀಟರ್​ ಅಳವಡಿಸದ ಅಧಿಕಾರಿಗಳು ಲಕ್ಷಾಂತರ ರೂ. ಲಪಾಟಯಿಸಲು 10 ವರ್ಷಗಳಿಂದ ನೀರಿನ ಬಿಲ್​ನಲ್ಲಿ ಸಮರ್ಪಕ ಮಾಹಿತಿಯನ್ನೇ ನಮೂದಿಸಿಲ್ಲ. ಕೆಎಚ್​ಬಿಯ ಎಇಇ ಬೊಪ್ಪಣ್ಣ ಹಲವು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆ ಬಗ್ಗೆ ಹೇಳಿದ್ದರೂ ಪ್ರಯೋಜನವಾಗಿಲ್ಲ. ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್​ ದೀಪ, ನೀರಿನ ಸಂಪರ್ಕ ಇಲ್ಲ. ಬಡಾವಣೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡಿಲ್ಲ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡದ ಕಾರಣ ಪ್ರತಿನಿತ್ಯ ಬಡಾವಣೆಗೆ ಬರುವ ಅನಧಿಕೃತ ವ್ಯಕ್ತಿಗಳು, ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಬಾಟಲ್​ಗಳನ್ನು ಬಿಸಾಡಿ ಹೋಗುತ್ತಿದ್ದಾರೆ. ಲೇಔಟ್​ ತುಂಬೆಲ್ಲ ಖಾಲಿ ಬಾಟಲ್​ಗಳ ರಾಶಿಯೇ ಬಿದ್ದಿದೆ.

ಜತೆಗೆ, ರಾತ್ರಿ ವೇಳೆ ರೇವ್​ ಪಾರ್ಟಿಗಳು ಸಹ ನಡೆಯುತ್ತಿವೆ. ಮಕ್ಕಳು, ವೃದ್ಧರು ಓಡಾಡುತ್ತಿದ್ದ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿರುವ ಪುಂಡರು ಏನಾದರೂ ಮಾಡಿದರೆ ಎಂಬ ಪ್ರಾಣಭಯ ಕಾಡುತ್ತಿದೆ. ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ.ವಿದ್ಯುತ್​ದೀಪ ಇಲ್ಲದ ಪರಿಣಾಮ ರಾತ್ರಿ ವೇಳೆ ಓಡಾಡಲು ತೊಂದರೆಯಾಗುತ್ತಿದೆ. ಕಳಪೆ ಗುಣಮಟ್ಟದಿಂದ ಕಟ್ಟಿರುವ ಮನೆಗಳು ಬಿರುಕು ಬಿಡುತ್ತಿವೆ ಎಂದು ನಿವಾಸಿಗಳು ಅಳಲು ತೊಂಡಿಕೊಂಡಿದ್ದಾರೆ.

ಟ್ಯಾಂಕರ್​ ನೀರೇ ಗತಿ: 700 ಎಕರೆ ಪ್ರದೇಶದಲ್ಲಿ ಸೂರ್ಯನಗರ ಬಡಾವಣೆ ನಿರ್ಮಿಸಿದ್ದು, ಎರಡನೇ ಹಂತಕ್ಕೆ ನೀರಿನ ಸಂಪರ್ಕವನ್ನೇ ಕೊಟ್ಟಿಲ್ಲ. ಕೆಎಚ್​ಬಿ ಕಡೆಯಿಂದ ಪ್ರತಿ ತಿಂಗಳು 3-4 ಟ್ಯಾಂಕರ್​ ನೀರು ಮಾತ್ರ ಸರಬರಾಜು ಆಗುತ್ತಿದೆ. ರಸ್ತೆಗಳು ಹಾಳಾಗಿ 2 ವರ್ಷಗಳೇ ಕಳೆದಿವೆ. ನೂರಾರು ಕುಟುಂಬಗಳು ಪ್ರತಿ ನಿತ್ಯ ಸಮಸ್ಯೆಗಳಿಂದ ರೋಸಿ ಹೋಗಿದ್ದು, ಇಲ್ಲಿ ಯಾಕಾದರೂ ಮನೆ ಖರೀದಿಸಿದ್ದೇವೆ ಎಂಬ ಸಂಕಟವಾಗುತ್ತಿದೆ ಎಂದು ಹೆಸರಲೆಚ್ಚಿಸದ ನಿವಾಸಿಯೊಬ್ಬರು ನೋವು ತೋಡಿಕೊಂಡಿದ್ದಾರೆ.