ಮಡಿಕೇರಿ:
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಮಲೆನಾಡು ಜಿಲ್ಲೆ ಕೊಡಗಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲದ ಸದ್ಬಳಕೆ ಮತ್ತು ವಿದ್ಯುತ್ ಉತ್ಪಾದನೆಯ ಮೇಲಿನ ಅವಲವಂಬನೆ ತಗ್ಗಿಸುವ ಪ್ರಮುಖ ಗುರಿ ಈ ಯೋಜನೆಯದ್ದಾಗಿದ್ದು, ಮನೆಯಲ್ಲೇ ವಿದ್ಯುತ್ ಉತ್ಪಾದಿಸಿ ಸರ್ಕಾರಕ್ಕೆ ಮಾರಾಟ ಮಾಡುವ ವ್ಯವಸ್ಥೆಯೂ ಇದರಲ್ಲಿದೆ. ಸೂರ್ಯ ಘರ್ ಯೋಜನೆ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಿದರೆ ಇನ್ನೂ ಹಲವರು ಈ ಯೋಜನೆ ಲಾಭ ಪಡೆದುಕೊಳ್ಳಬಹುದಾಗಿದೆ.
ಪುಟ್ಟ ಜಿಲ್ಲೆ ಕೊಡಗಿನಲ್ಲಿ ವರ್ಷದ 5 ತಿಂಗಳು ಕೂಡ ಬಹುತೇಕ ಮಳೆಗಾಲವೇ ಆಗಿರುತ್ತದೆ. ಕೆಲವು ಭಾಗಗಳಲ್ಲಂತೂ ಮಳೆ ಸುರಿಯುವ ಸಂದರ್ಭದಲ್ಲಿ ಸೂರ್ಯನ ದರ್ಶನವೇ ಆಗುವುದಿಲ್ಲ. ಇಂಥ ಪರಿಸ್ಥಿತಿ ಮಧ್ಯೆಯೇ ಇಲ್ಲಿನ ಪ್ರಯೋಗಶೀಲ ಮನಸ್ಥಿತಿಯ ಕೆಲವರು ಸೂರ್ಯನ ಬೆಳಕು ಬಳಸಿ ವಿದ್ಯುತ್ ಉತ್ಪಾದನೆಗೋಸ್ಕರವೇ ಕೇಂದ್ರ ಸರ್ಕಾರ ರೂಪಿಸಿರುವ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ನಿರುಪಯೋಗಿ ಅನ್ನಿಸಿಕೊಳ್ಳುವ ತಮ್ಮ ಮನೆ ಮಹಡಿ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಮನೆ ಬಳಕೆಗೆ ವಿದ್ಯುತ್ ಉತ್ಪಾದಿಸುವುದರ ಜತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಸೆಸ್ಕ್ಗೆ ಮಾರಾಟ ಮಾಡಿಯೂ ಲಾಭ ಗಳಿಸುತ್ತಿದ್ದಾರೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯಾಪ್ತಿಗೆ ಬರುವ 5 ಜಿಲ್ಲೆಗಳ ಪೈಕಿ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಅಳವಡಿಸಿಕೊಂಡಿರುವ ಫಲಾನುಭವಿಗಳ ಪಟ್ಟಿಯಲ್ಲಿ ಪುಟ್ಟ ಜಿಲ್ಲೆ ಕೊಡಗು 3ನೇ ಸ್ಥಾನದಲ್ಲಿದೆ. 2025ರ ಜೂನ್ ಅಂತ್ಯದ ತನಕ ಜಿಲ್ಲೆಯಲ್ಲಿ 106 ಫಲಾನುಭವಿಗಳು ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಇರುವ ಮೈಸೂರು ಜಿಲ್ಲೆಯಲ್ಲಿ 902, ದ್ವಿತೀಯ ಸ್ಥಾನ ಪಡೆದುಕೊಂಡಿರುವ ಹಾಸನದಲ್ಲಿ 131 ಫಲಾನುಭವಿಗಳಿದ್ದರೆ, ಮಂಡ್ಯದಲ್ಲಿ 81 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 38 ಫಲಾನುಭವಿಗಳು ಈ ಯೋಜನೆ ಮೂಲಕ ಸೌರ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸಿಕೊಂಡಿದ್ದಾರೆ.
ಪ್ರತಿ ಮನೆಗೆ ಉಚಿತ ವಿದ್ಯುತ್ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೂರ್ಯ ಘರ್ ಯೋಜನೆ ರೂಪಿಸಿದೆ. ವಿದ್ಯುತ್ ಉತ್ಪಾದನೆಗೆ ಸೌರಶಕ್ತಿ ಬಳಕೆ, ಈ ಮೂಲಕ ನೈಸರ್ಗಿಕ ಸಂಪನ್ಮೂಲದ ಸದ್ಬಳಕೆ ಹಾಗೂ ವಿದ್ಯುತ್ ಉತ್ಪಾದನೆಯ ಮೇಲಿನ ಅವಲವಂಬನೆ ತಗ್ಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಈ ಯೋಜನೆ ಮೂಲಕ ತಿಂಗಳಿಗೆ 300 ಯುನಿಟ್ ವಿದ್ಯುತ್ ಪಡೆಯಬಹುದಾಗಿದೆ. ಅಲ್ಲದೇ ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ಹಣ ಕೂಡ ಗಳಿಸಬಹುದಾಗಿದೆ. 2024ರ ಫೆ. 15ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು.
ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಮನೆಯ ಛಾವಣಿ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರ ಸಬ್ಸಿಡಿ ಕೊಡುತ್ತದೆ. ಸೌರ ಫಲಕಗಳ ಅಳವಡಿಕೆಗೆ ತಗಲುವ ವೆಚ್ಚದ ಮೇಲೆ ಶೇ. 60ರ ತನಕ ಸಬ್ಸಿಡಿ ಸಿಗುತ್ತದೆ. 1 ಕಿ.ವ್ಯಾಟ್ ನಿಂದ 3 ಕಿ.ವ್ಯಾಟ್ ವರೆಗಿನ ಸೌರ ವಿದ್ಯುತ್ ಘಟಕದ ಅಳವಡಿಕೆಗೆ ಸರ್ಕಾರ ಧನ ಸಹಾಯ ಕೊಡುತ್ತದೆ. 1 ಕಿ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಅಳವಡಿಕೆಗೆ 30 ಸಾವಿರ ರೂ., 2 ಕಿ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಅವಳವಡಿಕೆಗೆ 60 ಸಾವಿರ ರೂ. ಹಾಗೂ 3 ಕಿ.ವ್ಯಾಟ್ ಅಥವಾ ಹೆಚ್ಚಿನ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಅವಳವಡಿಕೆಗೆ 78 ಸಾವಿರ ರೂ. ಸಹಾಯಧನ ಸರ್ಕಾರದಿಂದ ಸಿಗುತ್ತದೆ.
ಫಲಾನುಭವಿಗಳು ಮತ್ತು ಸರ್ಕಾರ ಇಬ್ಬರಿಗೂ ಲಾಭ ತಂದುಕೊಡುವ ಒಂದು ವಿಶಿಷ್ಟ ಯೋಜನೆ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಆಗಿದ್ದು, ಈ ಮೂಲಕ ಸೌರ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸಿಕೊಂಡ ಫಲಾನುಭವಿಗಳು ತಿಂಗಳಿಗೆ 300 ಯುನಿಟ್‌ನಷ್ಟು ಉಚಿತ ವಿದ್ಯುತ್ ಪಡೆಯಬಹುದಾಗಿದೆ. ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ವಾರ್ಷಿಕ ಸುಮಾರು 17-18 ಸಾವಿರ ರೂ. ತನಕ ಆದಾಯ ಗಳಿಸುವ ಅವಕಾಶಗಳಿವೆ. ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಬ್ಯಾಂಕ್‌ನಿAದ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯಯೂ ಸಿಗುತ್ತದೆ. ಈ ಯೋಜನೆ 2026-27ರ ಹಣಕಾಸು ವರ್ಷದ ತನಕ ಚಾಲನೆಯಲ್ಲಿ ಇರುತ್ತದೆ.
ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿ ಆಗುವವರು ಭಾರತೀಯ ಪ್ರಜೆ ಆಗಿರಬೇಕು ಎನ್ನುವುದು ಮೊದಲ ಅರ್ಹತೆ ಆಗಿದೆ. ಈ ಯೋಜನೆಯನ್ನು ಅಳವಡಿಸಿಕೊಳ್ಳಲು ಬಯಸುವವರು ಸ್ವಂತ ಮನೆ ಹೊಂದಿರಬೇಕು. ಈ ಮನೆಯ ಮೇಲೆ ಸೌರಫಲಕಗಳನ್ನು ಅಳವಡಿಸಲು ಅಗತ್ಯವಾದ ಸೂಕ್ತ ಜಾಗ ಇರಬೇಕು. ಮನೆಯಲ್ಲಿ ಸೂಕ್ತ ರೀತಿಯ ವಿದ್ಯುತ್ ಸಂಪರ್ಕ ಇರಬೇಕು. ಈ ಮನೆಗೆ ಸಂಬAಧಿಸಿದAತೆ ಈ ಮೊದಲು ಸೌರಫಲಕಗಳನ್ನು ಅಳವಡಿಸಿಕೊಳ್ಳಲು ಸರ್ಕಾರದಿಂದ ಯಾವುದೇ ರೀತಿಯಲ್ಲಿ ಸಹಾಯಧನ ಪಡೆದುಕೊಂಡಿರಬಾರದು. ಇಂಥವರು ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟು ಅಗತ್ಯ ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಫಲಾನುಭವಿಗಳಿಗೆ ಲಾಭ ಮಾಡಿಕೊಡುವ ಉದ್ದೇಶ ಮಾತ್ರ ಹೊಂದಿಲ್ಲ. ದೇಶದಲ್ಲಿ ಸುಸ್ಥಿರ ಇಂಧನ ಮತ್ತು ಇಂಧನ ಸಬಲೀಕರಣದತ್ತ ಹೆಜ್ಜೆ ಹಾಕುವ ಕೇಂದ್ರ ಸರ್ಕಾರದ ಬದ್ಧತೆಯ ಪ್ರದರ್ಶನವೂ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಯೋಜನೆ ಮೂಲಕ ಬಡ ಅಥವಾ ಮಧ್ಯಮ ವರ್ಗದ ಸುಮಾರು ಒಂದು ಕೋಟಿ ಮನೆಗಳಿಗೆ ಛಾವಣಿಯ ಸೌರ ಫಲಕಗಳನ್ನು ಒದಗಿಸುವುದರ ಜತೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುವತ್ತ ಗಮನ ಕೇಂದ್ರೀಕರಿಸಲಾಗಿದೆ. ಮನೆಮಂದಿಯ ಮೂಲಭೂತ ವಿದ್ಯುತ್ ಅಗತ್ಯಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡಲು ಕೂಡ ಈ ಯೋಜನೆ ಸಹಾಯ ಮಾಡುತ್ತದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲೂ ನೆರವಾಗುತ್ತದೆ. ಇಂಧನ ಸವಾಲುಗಳನ್ನು ಕಡಿಮೆ ಮಾಡುವುದು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಸೌರಶಕ್ತಿ ಬಳಕೆ ಹೆಚ್ಚಿಸುವಲ್ಲಿಯೂ ಪ್ರಮುಖ ಹೆಜ್ಜೆಯಾಗಿದೆ ಎಂದೇ ಹೇಳಲಾಗುತ್ತಿದೆ.
ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಬಗ್ಗೆ ಜಿಲ್ಲೆಯ ಜನರಿಂದ ಇನ್ನೂ ಹೆಚ್ಚಿನ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಇದ್ದೇವೆ. ಇದೊಂದು ಉತ್ತಮ ಯೋಜನೆ ಆಗಿದ್ದು, ಈ ಯೋಜನೆಯ ಅನುಕೂಲತೆಗಳ ಬಗ್ಗೆ ಸಾಕಷ್ಟು ಪ್ರಚಾರ ನಡೆಸಲಾಗಿದೆ. ವಿದ್ಯುತ್ ಬಿಲ್ ಜತೆಗೂ ಈ ಯೋಜನೆಗೆ ಸಂಬAಧಿಸಿದ ಮಾಹಿತಿ ನೀಡಲಾಗುತ್ತಿದೆ. ಆಸಕ್ತಿ ಇರುವ ಸಾರ್ವಜನಿಕರು ವಿವರಗಳಿಗಾಗಿ ನಮ್ಮ ಕಚೇರಿ ಸಂಪರ್ಕ ಮಾಡಬಹುದು.
ಎಂ. ರಾಮಚಂದ್ರ, ಕಾರ್ಯಪಾಲಕ ಅಭಿಯಂತರ, ಸೆಸ್ಕ್, ಮಡಿಕೇರಿ