ಜಿಲ್ಲೆ

ಸರ್ವೇಯರ್ ಸಮಸ್ಯೆಗೆ ವಾರದೊಳಗೆ ಪರಿಹಾರ: ಶಾಸಕ ಕೆ.ರಘುಪತಿ ಭಟ್ ಭರವಸೆ

Udupi

ಉಡುಪಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಪರವಾನಗಿ ಪಡೆದ ಭೂಮಾಪಕರು ಮುಷ್ಕರು ನಡೆಸುತ್ತಿದ್ದು, ವಾರದೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪರವಾನಗಿ ಪಡೆದ ಭೂ ಮಾಪಕರು ಕಾಯಂ ಹುದ್ದೆ ಮತ್ತು ಬಾಕಿ ಹಣ ಪಾವತಿಸುವ ಪ್ರಮುಖ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು, ಕಳೆದ ಮೂರು ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದಾರೆ. ಪರಿಣಾಮ ಜಿಲ್ಲೆಯಲ್ಲಿ 8ರಿಂದ 10 ಸಾವಿರ ಕಡತಗಳು ವಿಲೇಗೆ ಬಾಕಿಯಾಗಿದೆ. ಇದರಿಂಂದ ಪ್ರಮುಖ ಕಂದಾಯ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಜನರಿಗೆ ಕ್ರಯ, ವಿಭಾಗಪತ್ರ, ದಾನಪತ್ರ, ಕನ್ವರ್ಶನ್ ಪಡೆಯಲು ಬೇಕಾದ 11ಇ ನಕ್ಷೆ ಸಿಗುತ್ತಿಲ್ಲ.

ಕಾಯಂ ಹುದ್ದೆ ಭರವಸೆ ಈಡೇರಿಸುವುದು ಅಸಾಧ್ಯವಾಗಿದ್ದು, ಇದು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ. ಸರ್ವೇಗೆ ಗ್ರಾಮೀಣ ಭಾಗದಲ್ಲಿ 1200, ನಗರ ಭಾಗದಲ್ಲಿ 2000 ಶುಲ್ಕವಿದ್ದು, ಇದರಲ್ಲಿ 800 ರೂ. ಶುಲ್ಕ ಭೂಮಾಪಕರಿಗೆ ಸರ್ಕಾರ ನೀಡುತ್ತದೆ. ಸರ್ವೇ ವೇಳೆ ಅಳತೆಯಾಗದ ಪ್ರಕರಣದಲ್ಲಿ 2013ರಿಂದ ಇಲ್ಲಿವರೆಗೆ ಸರ್ಕಾರ ಶುಲ್ಕ ಪಾವತಿಸಿಲ್ಲ. ಅಲ್ಲದೆ ಪೋಡಿಮುಕ್ತ ಅಭಿಯಾನದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದು, ಈ ಹಣವನ್ನು ಸರ್ಕಾರ ಪಾವತಿಸಿಲ್ಲ. ಒಬ್ಬೊಬ್ಬ ಭೂಮಾಪಕರಿಗೆ 3ರಿಂದ 4 ಲಕ್ಷ ರೂ. ಬಾಕಿ ಇದೆ ಎಂದು ದೂರಿದ್ದಾರೆ. ಜನರಿಗೆ ಸಮಸ್ಯೆಯಾಗುತ್ತಿರುವ ನಿಟ್ಟಿನಲ್ಲಿ ಭೂಮಾಪಕರು ಕೂಡಲೇ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳಿದಲ್ಲಿ ಮುಂದಿನ ಗುರುವಾರ ಭೂಮಾಪಕರ ಸಂಘದ ಪದಾಧಿಕಾರಿಗಳನ್ನು ಕಂದಾಯ ಸಚಿವ ಆರ್.ಅಶೋಕ್ ಬಳಿ ಕರೆದುಕೊಂಡು ಹೋಗಿ ಸಮಾಲೋಚನೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಸಚಿವರ ಬಳಿ ಫೋನ್‌ನಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದು, ಹಳೇ ಬಾಕಿ ಪಾವತಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಭೂಮಾಪಕರ ಸಂಘದ ಜಿಲ್ಲಾ ಅಧ್ಯಕ್ಷ ದುಷ್ಯಂತ್ ಕುಮಾರ್, ಸಂಘದ ಸದಸ್ಯರಾದ ಶಶಿಕುಮಾರ್, ರವಿಕಾಂತ್, ನಾಗೇಶ್, ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ಹಣದ ಮೂಲ ಹುಡುಕಬೇಕಿದೆ

ಸರ್ಕಾರಕ್ಕೆ ಶುಲ್ಕ ಪಾವತಿಸಿ ಅಳತೆಯಾಗದ ಪ್ರಕರಣದಲ್ಲಿ 2013ರಿಂದ ಇಲ್ಲಿವರೆಗೆ ಭೂಮಾಪಕರಿಗೆ ಶುಲ್ಕ ಪಾವತಿಸಿಲ್ಲ. ಈ ಮೊತ್ತ ಎಲ್ಲಿ ಹೋಗಿದೆ ಎಂಬುದು ಸರಿಯಾಗಿ ತಿಳಿದು ಬಂದಿಲ್ಲ ಎಂದು ಶಾಸಕ ರಘುಪತಿ ಭಟ್ ಅನುಮಾನ ವ್ಯಕ್ತಪಡಿಸಿದರು. ಇಲ್ಲಿ ಕೋಟ್ಯಂತರ ರೂ. ಹಣ ಬಾಕಿಯಾಗಿದೆ. ಈ ಹಣದ ಮೂಲ ಹುಡುಕಬೇಕಿದ್ದು, ಕಂದಾಯ ಸಚಿವರ ಬಳಿ ಈ ಬಗ್ಗೆ ಚರ್ಚಿಸಿ ಪರಿಶೀಲನೆ ನಡೆಸಲು ಮನವಿ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ಚರ್ಚಿಸಿ ನಿರ್ಧಾರ

ಶಾಸಕರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂಘದ ಎಲ್ಲ ಸದಸ್ಯರು ಸೋಮವಾರ ಸಭೆ ನಡೆಸಿ ಮುಷ್ಕರ ಹಿಂದಕ್ಕೆ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳುವುದಾಗಿ ಉಡುಪಿ ಜಿಲ್ಲಾ ಭೂಮಾಪಕರ ಸಂಘದ ಅಧ್ಯಕ್ಷ ದುಷ್ಯಂತ್ ಕುಮಾರ್ ತಿಳಿಸಿದರು.