ಜಿಲ್ಲೆ

ಶಾಲೆಗೆ ನೆರವು ನೀಡಲು ಸರ್ವೇ

Davangere - Desk - Mahesh Babu E

ಕೊಂಡ್ಲಹಳ್ಳಿ: ಕೆಎಂಎಸ್‌ಪಿಪಿ, ಐಎಲ್‌ಪಿ ಹಾಗೂ ಶಿಕ್ಷಣ ಫೌಡೇಂಶನ್ ವತಿಯಿಂದ ಸರ್ಕಾರಿ ಶಾಲೆಗಳಿಗೆ ಭೌತಿಕ, ಶೈಕ್ಷಣಿಕ ನೆರವು ಕಲ್ಪಿಸುವ ಉದ್ದೇಶದಿಂದ ಆಯ್ದ ಶಾಲೆಗಳ ಸರ್ವೇ ಮಾಡಲಾಗುತ್ತಿದೆ ಎಂದು ಎಂಡಿಎಲ್‌ಎಸ್ ಸುಗಮಕಾರರ ಟಿ.ಕೆ.ಗೋಪಾಲ್ ತಿಳಿಸಿದರು.

ಕೊಂಡ್ಲಹಳ್ಳಿಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸರ್ವೇ ಕಾರ್ಯದ ವೇಳೆ ಮಾತನಾಡಿ, ಮಕ್ಕಳ ಸಂಖ್ಯೆ, ಶಿಕ್ಷಕರು, ಎಸ್‌ಡಿಎಂಸಿ ಕಾರ್ಯ, ವಿದ್ಯುತ್ ಸಂಪರ್ಕ, ವಿಜ್ಞಾನ, ಕಂಪ್ಯೂಟರ್, ಲ್ಯಾಬ್, ಗ್ರಂಥಾಲಯ, ಕೊಠಡಿಗಳ ಪೇಟಿಂಗ್, ಶೌಚಗೃಹ, ಕುಡಿಯುವ ನೀರು ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುತ್ತಿದೆ ಎಂದರು.

ಸರ್ವೇ ಮಾಹಿತಿ ಆಧರಿಸಿ ಐಎಲ್‌ಪಿ, ಬಿಇಒ, ಬಿಆರ್‌ಸಿಗಳು ಶಾಲೆಗಳನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಶಾಲೆಗಳಿಗೆ ಪ್ರೊಜೆಕ್ಟರ್, ಕಂಪ್ಯೂಟರ್, ಕ್ರೀಡಾ ಸಾಮಾಗ್ರಿಗಳು, ಪುಸ್ತಕ, ಶೌಚಗೃಹ, ಡಿಜಿಟಲ್, ಇಂಗ್ಲೀಷ್ ಬೋಧಕರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ಕಾರಣಕ್ಕೆ ಮೊಳಕಾಲ್ಮೂರು ತಾಲೂಕಿನ ಆಯ್ದ 29 ಶಾಲೆಗಳಲ್ಲಿ ಸರ್ವೇ ಮಾಡಲಾಗುತ್ತದೆ. ಈ ಕಾರ್ಯಕ್ರಮವು ಈಗಾಗಲೇ ತುಮಕೂರು, ದಾವಣಗೆರೆ, ಯಾದಗಿರಿ, ಹಾವೇರಿ ಜಿಲ್ಲೆಗಳಲ್ಲಿ ಅನುಷ್ಠಾನದಲ್ಲಿದೆ ಎಂದರು.

ಸಿಆರ್‌ಪಿ ವೇಮಣ್ಣ, ಎಸ್‌ಡಿಎಂಸಿ ಸದಸ್ಯ ಎಂ.ಟಿ.ನಾಗರಾಜ್, ಮುಖ್ಯಶಿಕ್ಷಕ ಸಿ.ಚಂದ್ರಶೇಖರ್ ಇತರರಿದ್ದರು.