ಮಂಡ್ಯ: ಪರಿಶಿಷ್ಟ ಜಾತಿ ಒಳಮೀಸಲಾತಿ ದತ್ತಾಂಶ ಸಂಗ್ರಹಿಸುವ ಸಂಬಂಧ ಜಿಲ್ಲೆಯ ಕೆಲ ಗಣತಿದಾರರು ಸರಿಯಾಗಿ ಸಮೀಕ್ಷೆ ನಡೆಸದಿರುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಭಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್.ರಾಮಚಂದ್ರನ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ಪರಿಶಿಷ್ಟ ಜಾತಿ ಒಳಮೀಸಲಾತಿ ದತ್ತಾಂಶ ಸಂಗ್ರಹಿಸುವ ಸಮಗ್ರ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮೀಕ್ಷೆಯ ಕಾರ್ಯವನ್ನು ಜಿಲ್ಲೆಯಲ್ಲಿ ಚುರುಕುಗೊಳಿಸಿ ನಿಗದಿಪಡಿಸಿರುವ ಗುರಿ ಸಾಧಿಸಬೇಕು. ಸಮೀಕ್ಷೆಯು ನ್ಯಾಯ ಸಮ್ಮತ್ತವಾಗಿ ನಡಸಬೇಕು. ಗಣತಿದಾರರು ಸಾರ್ವಜನಿಕರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು. ಮೇಲ್ವಿಚಾರಕರು ಮತ್ತು ನೋಡಲ್ ಅಧಿಕಾರಿಗಳು, ಸಮೀಕ್ಷೆದಾರರು ಸರಿಯಾದ ಸಮಯಕ್ಕೆ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ಪರಿಶೀಲಿಸಬೇಕು. ಮಾತ್ರವಲ್ಲದೆ ನೀವುಗಳ ಸಹ ಸ್ಥಳ ಪರಿಶೀಲನೆ ನಡೆಸಿ. ಇನ್ನೂ ಹೆಚ್ಚಿನ ಕಾರ್ಯಕ್ಷಮತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೌಲಭ್ಯ ಒದಗಿಸಲು ಸಮೀಕ್ಷೆಗಳನ್ನು ನಡೆಸುವುದು ಅತ್ಯಂತ ಅಗತ್ಯ. ಸಮೀಕ್ಷೆ ಸೂಕ್ಷ್ಮ ವಿಚಾರವಾಗಿರುವುದರಿಂದ ಗಣತಿದಾರರು ಕಾರ್ಯದಕ್ಷತೆಯಿಂದ ನಿಖರವಾದ ಸಮೀಕ್ಷೆ ನಡೆಸಿ. ಜಿಲ್ಲೆಯಲ್ಲಿ ಎಲ್ಲ ಎಣಿಕೆದಾರರಿಗೆ ತರಬೇತಿ ನೀಡಲಾಗಿದೆಯೇ ಹಾಗೂ ತರಬೇತಿ ದಿನದಂದು ರಜೆಯ ಮೇಲೆ ತೆರಳಿದ್ದ ಗಣತಿದಾರರಿಗೆ ಮರು ತರಬೇತಿ ನೀಡಲಾಗಿದೆಯೇ ಎಂದು ಪರಿಶೀಲಿಸಿ. ತರಬೇತಿ ಪಡೆದಿರುವುದನ್ನು ನೋಡಲ್ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಬೇಸಿಗೆ ಸಮಯವಾಗಿರುವುದರಿಂದ ಸಮೀಕ್ಷೆಗೆ ಶಿಕ್ಷಕರನ್ನು ಸಮರ್ಪಕವಾಗಿ ಬೆಳೆಸಿಕೊಳ್ಳಿ. ಜಿಲ್ಲೆಯ ಎಲ್ಲ ತಾಲೂಕಿಗೆ ಹೋಲಿಸಿದರೆ ಮಂಡ್ಯ ನಗರದ ಸಮೀಕ್ಷೆಯ ಪ್ರತಿಶತ ಕಡಿಮೆ ಇದೆ. ನಿಗದಿಪಡಿಸಿದ ಗುರಿಯನ್ನು ಸಾಧಿಸದ ತಾಲೂಕು ಅಥವಾ ಸ್ಥಳಗಳಿಗೆ ಹೆಚ್ಚುವರಿ ಎಣಿಕೆದಾರರು ಬೇಕಿದ್ದರೆ ಮನವಿ ಸಲ್ಲಿಸಿ ಪಡೆದುಕೊಂಡು ಪ್ರಗತಿ ಸಾಧಿಸಿ. ನಗರದ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಸಾಧಿಸುವಲ್ಲಿ ಪೌರಾಯುಕ್ತರ ಪಾತ್ರ ಹೆಚ್ಚಿರುತ್ತದೆ. ಮಂಡ್ಯ ನಗರದ 11,357 ಪರಿಶಿಷ್ಟರ ಮನೆ ಪೈಕಿ 7,389 ಮನೆಗಳಲ್ಲಿ ಶೇ 65.1ರಷ್ಟು ಸಮೀಕ್ಷೆ ನಡೆಸಲಾಗಿದೆ. ಪೌರಾಯುಕ್ತರು, ತಹಸೀಲ್ದಾರ್ ಹಾಗೂ ಮಂಡ್ಯ ಉಪವಿಭಾಗಾಧಿಕಾರಿ ವಿಶೇಷ ಮುತುವರ್ಜಿ ವಹಿಸಿ ಇನ್ನೆರಡು ದಿನಗಳಲ್ಲಿ ಸಂಪೂರ್ಣ ಸಮಿಕ್ಷೆ ನಡೆಸಿಕೊಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸಮಗ್ರ ಸಮೀಕ್ಷೆಯಲ್ಲಿ ಮಂಡ್ಯ 4ನೇ ಸ್ಥಾನದಲ್ಲಿದೆ. 2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ 61,423 ಮನೆಗಳಿದ್ದು, ಈ ಪೈಕಿ 53,198 ಮನೆಗಳಲ್ಲಿ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಒಟ್ಟಾರೆ ಶೇ.86ರಷ್ಟು ಗುರಿ ಸಾಧಿಸಿದ್ದೇವೆ. ಇದಲ್ಲದೆ ಇತರೆ ಕುಟುಂಬಗಳ 3,91,286 ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ 1,823 ಮತಗಟ್ಟೆಗಳಿದ್ದು, 2,036 ಎಗಣತಿದಾರರಿದ್ದಾರೆ. ಈ ಗಣತಿದಾರರ ಮೇಲ್ವಿಚಾರಣೆಗೆ 179 ಮೇಲ್ವಿಚಾರಕರನ್ನು ನೇಮಿಸಲಾಗಿದೆ, ಪ್ರತ್ಯೇಕವಾಗಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ಎಣಿಕೆದಾರರು, ಮೇಲ್ವಿಚಾರಕರು ಹಾಗೂ ನೋಡೆಲ್ ಅಧಿಕಾರಿಗಳು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿರುವ ಛಾಯಾಚಿತ್ರವನ್ನು ಗ್ರೂಪ್‌ಗಳಲ್ಲಿ ಹಾಕುವಂತೆ ಸೂಚಿಸಲಾಗಿದೆ. ಪ್ರತಿ ದಿನದ ಸಮೀಕ್ಷೆಯ ವರದಿಯನ್ನು ಅವಲೋಕಿಸಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪೌರಾಯುಕ್ತೆ ಪಂಪಶ್ರೀ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ ಇತರರಿದ್ದರು.