ಜಿಲ್ಲೆ

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗೆ ಕಾರ್ಯಾಚರಣೆ

Dakshina Kannada

ಮಂಗಳೂರು: ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ವಲಸಿಗರ ಹೆಸರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ಹಿನ್ನೆಲೆಯಲ್ಲಿ ಒಂದು ವಾರದಿಂದ ಠಾಣಾ ಮಟ್ಟದಲ್ಲಿ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ನಡೆದಿದ್ದು, ಸರಿಯಾದ ದಾಖಲೆ ನೀಡದ 518 ಮಂದಿಯನ್ನು ಸೋಮವಾರ ವಿಚಾರಣೆ ನಡೆಸಲಾಯಿತು.

ಸ್ಟೇಟ್‌ಬ್ಯಾಂಕ್ ಬಳಿಯ ರೊಸಾರಿಯೊ ಸಭಾಂಗಣದಲ್ಲಿ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳು, ವಿವಿಧ ಠಾಣಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ನಡೆಸಿದರು.

ಒಂದು ವಾರದಿಂದ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಸ್ಟೇಷನ್‌ಗಳಲ್ಲಿ ಇರುವ ಕಾರ್ಮಿಕರು, ಅದರಲ್ಲೂ ಯಾರು ಅನುಮಾನಾಸ್ಪದವಾಗಿ ನೆಲೆಸಿದ್ದಾರೋ ಅವರೆಲ್ಲರ ದಾಖಲೆ ಪರಿಶೀಲನೆ ನಡೆಸಲಾಗಿದೆ. ಠಾಣೆಗೆ ಕರೆಸಿ ಮತ್ತು ಅವರು ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿ, ಕಾರ್ಮಿಕ ಗುತ್ತಿಗೆದಾರರೂ ಸೇರಿದಂತೆ ಸುಮಾರು 4 ಸಾವಿರ ಮಂದಿಯ ದಾಖಲೆ ಪರಿಶೀಲಿಸಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ಹಂತವಾಗಿ, ದಾಖಲೆಯನ್ನು ಸರಿಯಾಗಿ ನೀಡದ 518 ಮಂದಿಯ ಕಡ್ಡಾಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಗೃಹಸಚಿವರ ನಿರ್ದೇಶನ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎರಡು ವಾರದ ಹಿಂದೆ ಮಂಗಳೂರಿಗೆ ಭೇಟಿ ನೀಡಿ, ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸರ ಸಭೆ ನಡೆಸಿದ್ದರು. ಎಂಆರ್‌ಪಿಎಲ್ ಸೇರಿದಂತೆ ದೊಡ್ಡ ದೊಡ್ಡ ಕೈಗಾರಿಕೆಗಳಲ್ಲಿ, ಮೀನುಗಾರಿಕಾ ಚಟುವಟಿಕೆಯಲ್ಲಿ, ಡೈರಿ ಉದ್ಯಮದಲ್ಲಿ ಕೆಲಸ ಮಾಡಲು ಸಾಕಷ್ಟು ಮಂದಿ ಹೊರ ರಾಜ್ಯಗಳಿಂದ ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರು ಬರುತ್ತಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಸಂಪರ್ಕವೂ ಇರುವುದರಿಂದ ಅಕ್ರಮ ವಲಸಿಗರು ಅದರಲ್ಲೂ ಮುಖ್ಯವಾಗಿ ಬಾಂಗ್ಲಾದೇಶದಿಂದ ಸಾಕಷ್ಟು ಮಂದಿ ಬಂದಿರುವ ಸಾಧ್ಯತೆ ಇದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಪರಿಶೀಲನೆ ಮಾಡಬೇಕು ಎಂದು ಗೃಹ ಸಚಿವರು ಸಭೆಯಲ್ಲಿ ಸೂಚನೆ ನೀಡಿದ್ದರು. ಅದರಂತೆ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡಿಜಿ ಆ್ಯಂಡ್ ಐಜಿಪಿ, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅವರೂ ವಿವಿಧ ಸಭೆಗಳಲ್ಲಿ ಇದೇ ಸೂಚನೆ ಕೊಟ್ಟಿದ್ದರು.