ಪಡುಬಿದ್ರಿ: ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಕಾಪು ತಾಲೂಕಿನಲ್ಲಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಗುರುವಾರದವರೆಗೆ 321 ಮನೆಗಳನ್ನು ಗಣತಿದಾರರು ಸಂದರ್ಶಿಸಿದ್ದಾರೆ ಎಂದು ತಹಸೀಲ್ದಾರ್ ಪ್ರತಿಭಾ ಆರ್. ತಿಳಿಸಿದ್ದಾರೆ.
ಗಣತಿದಾರೊಂದಿಗೆ ತಾಲೂಕಿನ ಮಲ್ಲಾರು ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ ತಹಸೀಲ್ದಾರ್ ಪ್ರತಿಭಾ, ಮನೆ ಮನೆ ಸಮೀಕ್ಷೆ ಕರಾರುವಕ್ಕಾಗಿ ನಡೆಯಬೇಕು. ಮೊಬೈಲ್ ಆ್ಯಪ್ ಮೂಲಕ ನಿಖರವಾದ ಮಾಹಿತಿ ದಾಖಲಿಸಬೇಕು. ಮನೆಯವರೊಂದಿಗೆ ಸೌಜನ್ಯದಿಂದ ವರ್ತಿಸಿ ಮಾಹಿತಿ ಸಂಗ್ರಹಿಸಬೇಕು. ಪರಿಶಿಷ್ಟ ಕುಟುಂಬದವರೂ ಗಣತಿದಾರರಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು ಎಂದು ಪ್ರತಿಭಾ ಮನವಿ ಮಾಡಿದರು.
ಕಾಪು ತಾಲೂಕಿನಲ್ಲಿ ಪರಿಶಿಷ್ಟ ಜಾತಿಯ ಯಾವ ಮನೆಯೂ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂದು ಗಣತಿದಾರರಿಗೆ ಸೂಚಿಸಿದರು. ಹತ್ತು ಗಣತಿದಾರರಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಕಾತಿ ಮಾಡಲಾಗಿದೆ. ಕೆಲವೆಡೆ ಮೊಬೈಲ್ ಆ್ಯಪ್ ಸಮಸ್ಯೆ ಕಂಡುಬಂದಿದ್ದು, ತಕ್ಷಣವೇ ಆ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಗಣತಿದಾರರಿಗೆ ಸಮೀಕ್ಷೆಗೆ ಅನುವು ಮಾಡಿಕೊಡಲಾಗುತ್ತಿದೆ. ತಾಲೂಕಿನಲ್ಲಿ ಅಂದಾಜು ಶೇ.6ರಷ್ಟು ಎಸ್‌ಸಿ ಜನಸಂಖ್ಯೆಯಿದ್ದು, 5 ಮಾಸ್ಟರ್ ಟ್ರೈನರ್, 13 ಸೂಪರ್‌ವೈಸರ್ 130 ಗಣತಿದಾರರು ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ. ಗಣತಿದಾರರಾದ ಶಕೀಲಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ್ ಸಮೀಕ್ಷೆಯಲ್ಲಿ ಸಹಕರಿಸಿದರು.