ಜಿಲ್ಲೆ

ಫ್ಲೈಓವರ್‌ಗಾಗಿ ಭೂಸ್ವಾಧೀನಕ್ಕೆ ಸರ್ವೇ

ವೀರೇಶ ಸೌದ್ರಿ

ಸಂತೋಷ ವೈದ್ಯ ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ (ಮೇಲ್ಸೇತುವೆ)ಗಾಗಿ ಭೂಸ್ವಾಧೀನ ಪ್ರಕ್ರಿಯೆ ಜರುಗಿಸಲು ಸರ್ವೇ ಕಾರ್ಯಕ್ಕೆ ಕಾಲ ಸನ್ನಿಹಿತವಾಗಿದೆ. ಆ. 17, 18 ಹಾಗೂ 19 ರಂದು ಸರ್ವೇ ನಡೆಸುವುದಾಗಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯು ಸಾರ್ವಜನಿಕ ಸೂಚನೆ ಹೊರಡಿಸಿದೆ.

ಭೂಸ್ವಾಧೀನಾಧಿಕಾರಿಗಳ ಕಚೇರಿಯ ನೆರವಿನೊಂದಿಗೆ ಮೂರು ದಿನಗಳ ಕಾಲ ಭೂಸ್ವಾಧೀನಕ್ಕೆ ಒಳಪಡುವ ಆಸ್ತಿಗಳ ಅಳತೆ ಕಾರ್ಯ (ಸರ್ವೇ) ನಡೆಯಲಿದೆ. ಸಂಬಂಧಿಸಿದ ಆಸ್ತಿಗಳ ಮಾಲೀಕರು ಅಗತ್ಯ ಸಹಕಾರ ನೀಡಬೇಕೆಂದು ಸಾರ್ವಜನಿಕ ಸೂಚನೆಯಲ್ಲಿ ಕೋರಲಾಗಿದೆ.

‘‘ಇಂಥ ಸಂದರ್ಭಗಳಲ್ಲಿ ಎಷ್ಟು ದಿನಗಳ ಕಾಲ ಸರ್ವೇ ಕಾರ್ಯ ನಡೆಸಬೇಕು ಎಂಬುದು ಆಸ್ತಿ ಮಾಲೀಕರ ಸಹಕಾರವನ್ನು ಅವಲಂಬಿಸಿರುತ್ತದೆ. ಸದ್ಯದ ಮಟ್ಟಿಗೆ ನಾವು ಮೂರು ದಿನಗಳನ್ನು ನಿಗದಿಪಡಿಸಿ ಕೊಂಡಿದ್ದೇವೆ’ ಎಂದು ಹುಬ್ಬಳ್ಳಿ ನಗರ ಮಾಪನ ಕಚೇರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ ಗೆ ತಿಳಿಸಿದ್ದಾರೆ.

966 ಆಸ್ತಿಗಳು

ಹುಬ್ಬಳ್ಳಿಯ ಹೃದಯಭಾಗ ರಾಣಿ ಚನ್ನಮ್ಮ ವೃತ್ತವನ್ನು ಕೇಂದ್ರವಾಗಿರಿಸಿಕೊಂಡು 294 ಕೋಟಿ ರೂ. ವೆಚ್ಚದಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯು 3 ರಾಷ್ಟ್ರೀಯ ಹೆದ್ದಾರಿಯನ್ನು ಆವರಿಸಿಕೊಂಡಿದೆ. ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭೂ ಸ್ವಾಧೀನ ಪ್ರಕ್ರಿಯೆಗೆ ಜೂನ್ 1ರಂದು ಅಧಿಸೂಚನೆ ಹೊರಡಿಸಿತ್ತು. ಇದರನ್ವಯ 12.26 ಹೆಕ್ಟರ್ (1,22,657 ಚದರ ಮೀಟರ್) ವಿಸ್ತೀರ್ಣದ ಪ್ರದೇಶವನ್ನು ಗುರುತಿಸಲಾಗಿದ್ದು, 966 ಆಸ್ತಿಗಳು ಭೂಸ್ವಾಧೀನಕ್ಕೆ ಒಳಪಡಲಿವೆ ಎಂದು ಅಂದಾಜಿಸಲಾಗಿದೆ.

ರಾಣಿ ಚನ್ನಮ್ಮ ವೃತ್ತದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-63ರ ಕಿ.ಮೀ. 135.65 ರಿಂದ 136. 45ರವರೆಗೆ (ಹುಬ್ಬಳ್ಳಿ-ಗದಗ ರಸ್ತೆ), ರಾಷ್ಟ್ರೀಯ ಹೆದ್ದಾರಿ-4ರ ಕಿ.ಮೀ. 249ರಿಂದ 250.50ರವರೆಗೆ (ಹುಬ್ಬಳ್ಳಿ-ಧಾರವಾಡ ರಸ್ತೆ) ಹಾಗೂ ರಾಷ್ಟ್ರೀಯ ಹೆದ್ದಾರಿ-218ರ ಕಿ.ಮೀ. 192.8 ರಿಂದ 193.35ರವರೆಗೆ (ಹುಬ್ಬಳ್ಳಿ-ವಿಜಯಪುರ) ಭೂಸ್ವಾಧೀನ ಪ್ರಕ್ರಿಯೆಗೆ ಅವಶ್ಯವಾಗಿರುವ ಕಟ್ಟಡ ಸಹಿತ ಹಾಗೂ ಕಟ್ಟಡ ರಹಿತವಾಗಿರುವ ಜಮೀನುಗಳನ್ನು ಗುರುತಿಸಲಾಗಿದೆ. ಆ. 17, 18 ಮತ್ತು 19ರಂದು ಚನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣ, ಹೊಸೂರ ವೃತ್ತ, ಗೋಕುಲ ರಸ್ತೆ (ವಿಕಾಸನಗರ ಕ್ರಾಸ್‌ವರೆಗೆ) ಹಾಗೂ ಹು-ಧಾ ರಸ್ತೆ (ಕೆನರಾ ಹೋಟೆಲ್)ಯಲ್ಲಿ ಭೂಸ್ವಾಧೀನಕ್ಕೆ ಒಳಪಡುವ ಆಸ್ತಿಗಳ ಅಳತೆ ಕಾರ್ಯ ನಡೆಯಲಿದೆ.
ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ಸರ್ವೇ ಕಾರ್ಯಕ್ಕೆ ದಿನಾಂಕ ನಿಗದಿಯಾಗಿಲ್ಲ. ಒಂದಿಷ್ಟು ಭೂಮಾಪಕರು (ಸರ್ವೇಯರ್) ಬೇರೆ ಸರ್ಕಾರಿ ಕೆಲಸದಲ್ಲಿ ನಿರತರಾಗಿರುವುದರಿಂದ ಆಗಸ್ಟ್ ತಿಂಗಳ ಅಂತ್ಯದಲ್ಲಿ ಈ ಮಾರ್ಗದಲ್ಲಿ ಸರ್ವೇ ಕಾರ್ಯ ಆರಂಭಗೊಳ್ಳುವ ನಿರೀಕ್ಷೆ ಇದೆ. ಹಾಗೇ ನೋಡಿದರೆ ಈ ಮಾರ್ಗದಲ್ಲಿ ಇನ್ನೂ ಕಾಮಗಾರಿಯೇ ಆರಂಭಗೊಂಡಿಲ್ಲ.

ರಾಷ್ಟ್ರೀಯ ಹೆದ್ದಾರಿಗಳ ಕಾಯ್ದೆ-1956ರ 3 (ಎ) ಸೆಕ್ಷನ್ ಪ್ರಕಾರ ಈಗ ಗುರುತಿಸಿರುವ ಎಲ್ಲ 966 ಆಸ್ತಿಗಳು ಭೂ ಸ್ವಾಧೀನಕ್ಕೆ ಒಳಪಡುವ ಸಾಧ್ಯತೆಗಳಿಲ್ಲ. ಸರ್ವೇ ಬಳಿಕ ನಿಖರ ಲೆಕ್ಕ ಸಿಗಲಿದೆ. ಅಂತಿಮವಾಗಿ ಅವಶ್ಯವಾಗಿರುವ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪರಿಹಾರ ನಿಗದಿಯಾಗಲಿದೆ.

ಕಾಮಗಾರಿಯ ಪ್ರಗತಿ ವಿವರ

ಹುಬ್ಬಳ್ಳಿ ಪ್ಲೈಓವರ್ ನಿರ್ಮಾಣಕ್ಕೆ 2021ರ ಜನವರಿ 15ರಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು. ಕಾಮಗಾರಿ 2021ರ ಜೂನ್‌ನಲ್ಲಿ ಆರಂಭಗೊಂಡಿದ್ದು, 2024ರ ಜೂನ್‌ನಲ್ಲಿ ಪೂರ್ಣಗೊಳ್ಳಬೇಕಿದೆ. ಸದ್ಯ ಕಾಮಗಾರಿಯು ನಿಧಾನಗತಿಯಲ್ಲಿ ಸಾಗಿದ್ದು, ಇನ್ನೊಂದು ವರ್ಷದೊಳಗೆ ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ. ಬಸವವನದಿಂದ ಐಟಿ ಪಾರ್ಕ್ ಮಾರ್ಗವಾಗಿ ಹೊಸೂರ ವೃತ್ತದಿಂದ ಹಾದು, ಗೋಕುಲ ರಸ್ತೆ ಫೆರ್ನ್ ಹೋಟೆಲ್‌ವರೆಗೆ ಫ್ಲೈಓವರ್‌ನ ಫಿಲ್ಲರ್‌ಗಳು ತಲೆ ಎತ್ತಿವೆ. ಆದರೆ, ಆರ್ಮ್‌ಗಳನ್ನು ಜೋಡಿಸಿಲ್ಲ. ಕೋರ್ಟ್ ವೃತ್ತದಿಂದ ಗಿರಿಯಾಸ್ ಮಳಿಗೆಯವರೆಗೆ ಫಿಲ್ಲರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಫ್ಲೈಓವರ್‌ನ ಫಿಲ್ಲರ್‌ಗಳ ಎತ್ತರ ಹಾಗೂ ಆರ್ಮ್ ಅಗಲದಲ್ಲಿ ರಸ್ತೆ ಮಾರ್ಗಕ್ಕೆ ಅನುಗುಣವಾಗಿ ವ್ಯತ್ಯಾಸವಿದೆ. 7.5 ಮೀಟರ್ ಹಾಗೂ 5.5 ಮೀಟರ್ ಎತ್ತರದ ಫಿಲ್ಲರ್‌ಗಳಿವೆ. ಆರ್ಮ್ ಅಗಲ 5.5 ಮೀಟರ್, 14 ಮೀಟರ್ ಹಾಗೂ 16.5 ಮೀಟರ್‌ಗಳಿವೆ. ಈ ವ್ಯತ್ಯಾಸಕ್ಕೆ ಅನುಗುಣವಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಎಷ್ಟು ಪ್ರದೇಶಗಳು ಬರಲಿವೆ ಎಂಬುದು ಅಂತಿಮವಾಗಿ ನಿರ್ಧಾರವಾಗಲಿವೆ.