ಜಿಲ್ಲೆ

ಜಿಲ್ಲೆಯಲ್ಲಿ ವೇಗದಿಂದ ಸಾಗಿದ ಸಮೀಕ್ಷೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೆಲ ಅಡೆತಡೆಯಿಂದ ಆರಂಭಿಕ ವಿಘ್ನ ಎದುರಾದರೂ ಸದ್ಯ ವೇಗ ಪಡೆದುಕೊಂಡಿದೆ.

ರಾಜ್ಯಾದ್ಯಂತ ಇದೇ ಸೆ.22ರಿಂದ ರಾಜ್ಯ ಸರ್ಕಾರ ಚಾಲನೆ ನೀಡಲಾಗಿತ್ತು. ನಗರದಲ್ಲೂ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಆ ದಿನದಂದೇ ಸಾಂಕೇತಿಕವಾಗಿ ಚಾಲನೆ ನೀಡಿದ್ದರು. ಆರಂಭದ ಎರಡ್ಮೂರು ದಿನಗಳು ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲೂ ಸರ್ವರ್ ನೆಟವರ್ಕ್ ಸಮಸ್ಯೆಯಿಂದಾಗಿ ಆ್ಯಪ್ ಓಪನ್ ಆಗಿಲ್ಲ. ಯುಎಚ್‌ಐಡಿ ತೋರಿಸುತ್ತಿರಲಿಲ್ಲ ಹಾಗೂ ಒಟಿಪಿ ಬರಲಿಲ್ಲ. ಅಲ್ಲದೇ, ಸಮೀಕ್ಷೆ ಬಗ್ಗೆ ಜನರಿಗೂ ಕೂಡ ಪೂರ್ಣ ಮಾಹಿತಿ ಕೊರತೆಯಿಂದ ಆರಂಭದಲ್ಲಿ ಕನಿಷ್ಠ ಪ್ರಮಾಣದಲ್ಲೂ ಸಮೀಕ್ಷೆ ಕಾರ್ಯ ನಡೆಯಲಿಲ್ಲ.

1.46 ಲಕ್ಷ ಮನೆಗಳು ಪೂರ್ಣ : ಜಿಲ್ಲೆಯಲ್ಲಿ ಈವರೆಗೆ 3,405 ಬ್ಲಾಕ್‌ಗಳನ್ನು ಹಂಚಿಕೆ ಮಾಡಲಾಗಿದೆ. 3,227 ಗಣತಿದಾರರನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟು 3,85,908 ಮನೆಗಳ ಪೈಕಿ 1.46 ಲಕ್ಷ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ಮೂರು ದಿನದಿಂದ ನಿತ್ಯ ನಲವತ್ತು ಸಾವಿರಕ್ಕೂ ಅಧಿಕ ಮನೆಗಳ ಸರ್ವೆ ನಡೆಯುತ್ತಿದೆ. ಇದರೊಂದಿಗೆ ಈವರೆಗೆ ಜಿಲ್ಲೆಯಲ್ಲಿ ಶೇ. 40.09 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ರಾಜ್ಯದಲ್ಲೇ ಬಳ್ಳಾರಿ ಜಿಲ್ಲೆಯೂ ಹದಿನೈದನೇ ಸ್ಥಾನದಲ್ಲಿದೆ. ಅಲ್ಲದೆ, ಪ್ರತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿಯೇ ಸಮೀಕ್ಷೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಮಾಹಿತಿ ಒದಗಿಸುವ ಮೂಲಕ ಸಮೀಕ್ಷೆ ಒಳಪಡಲು ಸರ್ಕಾರ ಅವಕಾಶ ನೀಡಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

ಆರಂಭದ ವಿಘ್ನಗಳು : ಸಮೀಕ್ಷೆ ವೇಳೆ ಆರಂಭದಲ್ಲಿ ಜೆಸ್ಕಾಂ ಇಲಾಖೆಯಿಂದ ಮನೆಗಳಿಗೆ ಅಂಟಿಸಲಾಗಿರುವ ಜಿಯೋ ಟ್ಯಾಗನ್ ಯುಎಚ್‌ಐಡಿ ಸಂಖ್ಯೆ ತೋರಿಸದಿರುವುದು, ಸಾರ್ವಜನಿಕರ ಒಟಿಪಿ, ಸಮರ್ಪಕ ಮಾಹಿತಿ ನೀಡದಿರುವುದು. ಹೀಗೆ ಒಂದಲ್ಲ, ಎರಡಲ್ಲ ಸಾಲು ಸಾಲು ಸಮಸ್ಯೆಗಳು ಎದುರಾದ ಪರಿಣಾಮ ಗಣತಿದಾರರು ಸಮೀಕ್ಷೆಯಿಂದ ಮನೆಗಳಿಗೆ ವಾಪಾಸ್ಸಾಗುತ್ತಿದ್ದು ಕಂಡು ಬಂತು. ಸಮೀಕ್ಷಾ ಕಾರ್ಯಕ್ಕೆ ಸಿದ್ದಪಡಿಸಿರುವ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಎದುರಾದ ಹಿನ್ನೆಲೆಯಲ್ಲಿ ಬೇರೆ ಬೇರೆ ವರ್ಷನ್ ಆ್ಯಪ್‌ಗಳನ್ನು ನೀಡಿದರೂ, ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಮೊದಲ ಎರಡು ದಿನ ಆ್ಯಪ್ ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಮೂರನೇ ದಿನ ಬುಧವಾರ 3.3 ವರ್ಷನ್ ಆ್ಯಪ್ ನೀಡಲಾಗಿತ್ತು. ಅದೂ ಸಹ ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆ ಸದ್ಯ 3.4 ವರ್ಷನ್ ಆ್ಯಪ್ ಗಣತಿದಾರರಿಗೆ ನೀಡಲಾಗಿದೆ.

ಲೋಕೇಷನ್ ಸಮಸ್ಯೆ : ಸಮೀಕ್ಷೆಯ ನಾನಾ ಸಮಸ್ಯೆಗಳಿಂದ ಗಣತಿದಾರರು ತಪ್ಪಿಸಿಕೊಳ್ಳಲು ಹೆಲ್ತ್ ಸರ್ಟಿಫಿಕೆಟ್ ಒದಗಿಸಿ ಇಲಾಖೆಯ ಅಧಿಕಾರಿಗಳಿಗೆ ರವಾನಿಸಿ ತಪ್ಪಿಸುವಂತೆ ಮೊರೆ ಹೋಗಿದ್ದರು. ಇನ್ನೂ ಕೆಲವರು ರಾಜಕೀಯ ಮುಖಂಡರ ಹಾಗೂ ನಾನಾ ಸಂಘಟನೆ ಪದಾಧಿಕಾರಿಗಳ ಮೂಲಕ ಒತ್ತಡ ಹೇರಿ ಸಮೀಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಜೆಸ್ಕಾಂ ಇಲಾಖೆಯಿಂದ ಮನೆಯ ಬಾಗಿಲಿಗೆ ಅಂಟಿಸಿರುವ ಜಿಯೋ ಟ್ಯಾಗ್‌ಗಳು ದಸರಾ ಹಬ್ಬದ ಹಿನ್ನೆಲೆ ಕೆಲವರು ಮನೆ ಸ್ವಚ್ಛಗೊಳಿಸುವ ಕಿತ್ತು ಹಾಕಿದ್ದಾರೆ. ಇದರಿಂದ ಲೋಕೇಷನ್ ಸಮಸ್ಯೆಯಾಗಿದೆ. ಅಲ್ಲದೆ, ಯಾರು ಇಲ್ಲದ ಮನೆಗಳಿಗೆ ಅಂಟಿಸಿರುವುದರಿಂದ ಗಣತಿದಾರರು ಮನೆಗಳಿಗೆ ತಲುಪಿದ ವೇಳೆ ಸಮರ್ಪಕ ಮಾಹಿತಿ ನೀಡುವವರು ಇಲ್ಲ ಎಂಬುದು ಪ್ರಮುಖ ಸಮಸ್ಯೆಯಾಗಿದೆ. ಅಲ್ಲದೆ, ಕೆಲವೊಂದು ಭಾಗ್ಯಜ್ಯೋತಿ ಯೋಜನೆಯಡಿ ಇರುವ ಫಲಾನುಭವಿಗಳ ಮನೆಗಳಿಗೂ ಟ್ಯಾಗ್ ಅಂಟಿಸಿಲ್ಲ ಎನ್ನಲಾಗಿದೆ.

ಕೋಟ್..... ಜಿಲ್ಲೆಯಲ್ಲಿ ಮೂರು ದಿನದಿಂದ ಸಮೀಕ್ಷೆ ವೇಗ ಪಡೆದುಕೊಂಡಿದೆ. ಶಿಕ್ಷಕರ ಕೊರತೆಯಿಂದ ಆರಂಭದಲ್ಲಿ ಹಿಂದೆ ಉಳಿದಿತ್ತು. ಎಲ್ಲ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ರಾಜ್ಯದಲ್ಲೇ 15ನೇ ಸ್ಥಾನದಲ್ಲಿವೆ. ನಿಗದಿತ ಸಮಯದಲ್ಲೇ ಸಮೀಕ್ಷೆ ಪೂರ್ಣಗೊಳಿಸುವ ವಿಶ್ವಾಸವಿದೆ.

- ನಾಗೇಂದ್ರ ಪ್ರಸಾದ್ ಕೆ. ಡಿಸಿ, ಬಳ್ಳಾರಿ,