ಕುಶಾಲನಗರ:
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಮಂಜೂರಾದ ಜಾಗದ ಹದ್ದುಬಸ್ತು ಗುರುತಿಸಿದ ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಬುಧವಾರ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡೆ ಹೊಸೂರುಗ್ರಾಮದ ಸ.ನಂ. 1/1ರ 1.70 ಎಕ್ರೆ ಹಾಗೂ ಬೊಳ್ಳೂರು ಗ್ರಾಮದ ಸ.ನಂ 1/2ರ 0.80 ಎಕರೆ ಸೇರಿ ಒಟ್ಟು 2.50 ಎಕರೆ ನಿವೇಶನ ಜಾಗವನ್ನು ಗುಡ್ಡೆಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಉದ್ದೇಶಕ್ಕಾಗಿ ಕಾರ್ಯ ನಿರ್ವಹಣಾಧಿಕಾರಿ, ತಾಲೂಕು ಪಂಚಾಯಿತ್, ಸೋಮವಾರಪೇಟೆ ಇವರ ಹೆಸರಿಗೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದರು.
ಈ ಜಾಗದ ಹಸ್ತಾಂತರ ಪ್ರಕ್ರಿಯೆಗೆ ಸಾರ್ವಜನಿಕರು ಅಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಗೆ, ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನದಂತೆ ಬುಧವಾರ ಸಾಕಷ್ಟು ಪೊಲೀಸ್ ಬಂದೋಬಸ್ತ್ನೊAದಿಗೆ ತೆರಳಿ ಸ್ಥಳ ಗುರುತಿಸಿ ಗ್ರಾಮ ಪಂಚಾಯತಿ ವಶಕ್ಕೆ ಒಪ್ಪಿಸಲಾಯಿತು.
ಈ ಸಂದರ್ಭ ತಾಲೂಕು ದಂಡಾಧಿಕಾರಿ ಕಿರಣ್ ಗೌರಯ್ಯ, ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್, ಕಂದಾಯ ನಿರೀಕ್ಷಕ ಸಂತೋಷ್ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸದಸ್ಯರು, ಕಂದಾಯ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಸರ್ವೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಕುಶಾಲನಗರ ಗ್ರಾಮೀಣ ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕ ಮೋಹನ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.