ಕಾರವಾರ: ರಾಜ್ಯ ಸರ್ಕಾರ ಸೆ.22 ರಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ `ಬಾಂದಿ' (ಬಿಎಎನ್‌ಡಿಐ)ಎಂದು ನಮೂದಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಬಾಂದಿ ಸಮಾಜೋನ್ನತಿ ಸಂಘದ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ್ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಾಸವಾಗಿರುವ ಬಾಂದಿ ಸಮಾಜ ಯಾವುದೇ ಪಟ್ಟಿಗೆ ಸೇರದೇ ಅತಂತ್ರವಾಗಿದೆ. 1976 ರ ನವೆಂಬರ್ 25 ರಂದು ಎಸ್‌ಸಿ ಪಟ್ಟಿಯ 16 ನೇ ಕ್ರಮ ಸಂಖ್ಯೆಯಲ್ಲಿ ಸೇರಿಸಲಾಯಿತು. ಅದರಂತೆ ನಮ್ಮ ಸಮುದಾಯದವರಿಗೆ ಎಸ್‌ಸಿ ಪ್ರಮಾಣಪತ್ರ ನೀಡಲಾಯಿತು. ಅದಕ್ಕೂ ಮೊದಲು ಸಮುದಾಯವು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿತ್ತು ಅದನ್ನು 1977 ರಲ್ಲಿ ತೆಗೆದು ಹಾಕಲಾಯಿತು.
ಆದರೆ, ಒಂದು ವರ್ಷದ ನಂತರ ನಮಗೆ ನೀಡಲಾದ ಎಸ್‌ಸಿ ಪ್ರಮಾಣಪತ್ರವನ್ನು ತಡೆ ಹಿಡಿಯಲಾಯಿತು. ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂದು ಕೆಲವರ ಮೇಲೆ ಪ್ರಕರಣವನ್ನೂ ದಾಖಲಿಸಲಾಯಿತು. ನಮ್ಮನ್ನು ಎಸ್‌ಸಿಗೆ ಸೇರಿಸಿ ಎಂದು ಸಮುದಾಯದರ‍್ಯಾರೂ ಅರ್ಜಿ ನೀಡಿರಲಿಲ್ಲ. ಆದರೆ, ಸರ್ಕಾರವೇ ಸೇರಿ, ಸರ್ಕಾರವೇ ಪ್ರಮಾಣಪತ್ರ ತಡೆ ಹಿಡಿದು ನಮಗೆ ತೊಂದರೆ ನೀಡಿತು.
ಸಾಕಷ್ಟು ಹೋರಾಟದ ಬಳಿಕ 24 ವರ್ಷಗಳ ಬಳಿಕ ಎಂದರೆ 2002 ರಲ್ಲಿ ನಮ್ಮ ಸಮುದಾಯದ ಹೆಸರನ್ನು ಬಾಂಽ (ಬಿಎಎನ್‌ಡಿಎಚ್‌ಐ) ಎಂದು ಬದಲಾಯಿಸಿ ಹಿಂದುಳಿದ ವರ್ಗ ಎ ಪಟ್ಟಿಯಲ್ಲಿ ಸೇರಿಸಿತು. ಈಗ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ ಪಟ್ಟಿಯಲ್ಲಿಯೂ ಬಾಂಽ ಎಂದೇ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಈ ಹೆಸರಿಲ್ಲ. ಇದರಿಂದ ಕೇಂದ್ರ ಸರ್ಕಾರದ ಯಾವುದೇ ಸೌಲಭ್ಯ ನಮ್ಮ ಸಮುದಾಯಕ್ಕೆ ಮೀಸಲಾತಿಯ ಅಡಿ ಸಿಗುತ್ತಿಲ್ಲ. ಸಾಮಾನ್ಯ ವರ್ಗದಲ್ಲಿಯೇ ನಾವು ಪೈಪೋಟಿ ನಡೆಸಬೇಕಿದೆ.
ಬಿಎಎನ್‌ಡಿಐ- `ಬಂಡಿ' ಜಾತಿ ಉತ್ತರ ಕರ್ನಾಟಕದಲ್ಲಿದೆ ಎಂಬುದು ಅಽಕಾರಿಗಳ ವಾದ. ಆದರೆ, ಬಂಡಿವಡ್ಡರ್ ಇದ್ದಾರೆಯೇ ಹೊರತು ಬಂಡಿ ಎಂಬ ಸಮುದಾಯ ಎಲ್ಲೂ ಇಲ್ಲ. ಯಾವುದೇ ಕುಲ ಶಾಸ್ತ್ರೀಯ ಅಧ್ಯಯನ ನಡೆಸದೇ ನಮ್ಮ ಸಮುದಾಯದ ಹೆಸರನ್ನು ಬದಲಾಯಿಸಿ ಎರಡು ಮೂರು ತಲೆಮಾರಿನ ಹಲವರಿಗೆ ಅನ್ಯಾಯವಾಗಿದೆ. ನಮ್ಮನ್ನು ಎಸ್‌ಸಿಗೆ ಸೇರಿಸಿ ಎಂದು ನಾವು ಒತ್ತಾಯ ಮಾಡುತ್ತಿಲ್ಲ. ಎಲ್ಲೂ ಇಲ್ಲದೇ ಅತಂತ್ರ ಮಾಡಬೇಡಿ ಎಂದು ಆಯೋಗಕ್ಕೆ ಮನವಿ ಮಾಡಿದ್ದೇವೆ. ಅವರಿಂದ ಉತ್ತರ ಬಂದಿಲ್ಲ ಎಂದರು.
ಈಗ ಸಮುದಾಯದವರು ಜಾತಿ ಪಟ್ಟಿಯಲ್ಲಿ ನಮ್ಮ ಮೂಲ ಜಾತಿ `ಬಾಂದಿ' ಎಂದು ನಮೂದಿಸಬೇಕು ಎಂದು ಒತ್ತಾಯಿಸಿದರು. ಸಮಾಜದ ಪ್ರಮುಖರಾದ ರಾಮಕೃಷ್ಣ ಲೋಲೇಕರ್, ನಾಗೇಶ ಯಲ್ಲಾಪುರಕರ್, ಪ್ರಮೋದ ಬಾಂದೇಕರ್, ಚಂದ್ರಶೇಖರ ಬಾಂದೇಕರ್, ಬಾಬು ಬಾಂದೇಕರ್, ಮನೋಜ ಬಾಂದೇಕರ್, ರಾಜಾ ಬಾಂದೇಕರ್, ಸಂಧ್ಯಾ ಬಾಡ್ಕರ್, ಸಂಜಯ ಬಾಂದೇಕರ್, ಇತರರು ಇದ್ದರು.