ವಿಜಯವಾಣಿ ಸುದ್ದಿಜಾಲ ಹಂದನಕೆರೆ
ಹೋಬಳಿ ಕೇಂದ್ರದಲ್ಲಿರುವ ಕಂದಾಯ ಇಲಾಖೆ ನಾಡ ಕಚೇರಿ ಸೋನೆ ಮಳೆ ಬಂದರೂ ತೊಟ್ಟಿಕ್ಕುತ್ತಿದ್ದು, ಕೆಲಸ ಮಾಡಲಾಗದ ಪರಿಸ್ಥಿತಿ ತಂದೊಡ್ಡಿದೆ.
ಹಂದನಕೆರೆಯಲ್ಲಿರುವ ನಾಡಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಲು, ದಾಖಲೆಗಳನ್ನು ಪಡೆಯಲು ಜನರು ಪ್ರತಿನಿತ್ಯ ಆಗಮಿಸುತ್ತಾರೆ. ಆದರೆ ಮಳೆಯಿಂದ ಮಹಡಿ ಸೋರಲಾರಂಭಿಸಿರುವುದು ಕಚೇರಿಯಲ್ಲಿರುವ ಕಂಪ್ಯೂಟರ್ ಸಹಿತ ಎಲ್ಲ
ವಸ್ತುಗಳು ಹಾಳಾಗುವಂತಾಗಿದೆ.
ಮಳೆಗೆ ನೆನೆದು ಛಾವಣಿ ಯಾವುದೇ ಸಂದರ್ಭದಲ್ಲಿಯಾದರೂ ಬೀಳುವ ಸ್ಥಿತಿಯಲ್ಲಿದ್ದು, ಜನರು ಹಾಗೂ ಸಿಬ್ಬಂದಿ ಪ್ರಾಣಭಯದಲ್ಲಿಯೇ ಕೆಲಸ ಮಾಡುವಂತಾಗಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ನೀರು ತೊಟ್ಟಿಕ್ಕುವ ಜಾಗದಲ್ಲಿ ಬಕೆಟ್ಗಳನ್ನಿಟ್ಟುಕೊಂಡು ಮೈಮೇಲೆ ಜರ್ಕಿನ್ ಹೊದ್ದು ಕೆಲಸ ಮಾಡಬೇಕಿದೆ.
ಕಿರಿಕಿರಿಯಲ್ಲಿಯೇ ನಿತ್ಯ ಕೆಲಸ: ಮಳೆ ಬಂದ ಸಂದರ್ಭದಲ್ಲಿ ನಾಡಕಚೇರಿ ತೊಟ್ಟಿಕ್ಕುವುದು ಶತಸಿದ್ಧವಾಗಿದ್ದು, ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ನಿತ್ಯ ಕಿರಿಕಿರಿಯಲ್ಲಿಯೇ ಕೆಸಲ ಮಾಡುವಂತಾಗಿದೆ. ರಾತ್ರಿ ಮಳೆ ಸುರಿದರೆ ಹಗಲೆಲ್ಲವೂ ಕಚೇರಿಯಲ್ಲಿ ನೀರು ತುಂಬಿಕೊಂಡು ಅದನ್ನು ಹೊರಹಾಕುವುದೇ ಸಿಬ್ಬಂದಿಯ ಕೆಲಸವಾಗಿದೆ.