ಸುರಪುರ: ತಾಲೂಕಿನ ಕೆಲ ಶಿಕ್ಷಕರು ಕೇವಲ ಹಾಜರಾತಿಗೆ ಸೀಮಿತವಾಗಿದ್ದು, ಅದು ಮುಂಬರುವ ದಿನಗಳಲ್ಲಿ ತಪ್ಪಬೇಕು. ಇಲ್ಲದಿದ್ದರೆ ಪರಿಣಾಮ ಎದರಿಸಬೇಕಾಗುತ್ತದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಎಚ್ಚರಿಕೆ ನೀಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅದನ್ನು ಅರಿತು ಕೆಲಸ ಮಾಡಬೇಕು ಎಂದು ಹೇಳಿದರು.
ಶಿಕ್ಷಕರು ಸಮಯ ಪಾಲನೆ ಮಾಡುವುದು ತುಂಬಾ ಮುಖ್ಯ. ನನ್ನ ತಂದೆಯ ಸ್ನೇಹಿತರಾದ ಸಂಪತ್ ಸರ್ ಮಾಡಿದ ಬೋಧನೆಯಿಂದ ನಾನೊಬ್ಬ ಎಂಎಲ್‌ಎ (ಶಾಸಕ)ಆಗಿ ಜನರ ಮನಸ್ಸಿನಲ್ಲಿ ನೆಲೆಸಲು ಕಾರಣವಾಗಿದೆ. ನನ್ನ ಪ್ರತಿಯೊಂದು ಅಭಿವೃದ್ಧಿಗೆ ಗುರುಗಳೇ ಕಾರಣ. ಹೀಗಾಗಿ ಶಿಕ್ಷಕರು ಮಕ್ಕಳಲ್ಲಿ ಕಲಿಕೆಯ ಹುಚ್ಚನ್ನು ಹಿಡಿಸಿ ಅವರನ್ನು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಸುರಪುರದಲ್ಲಿ ಸ್ಥಗಿತಗೊಂಡಿರುವ ನೂತನ ಬಿಇಒ ಕಚೇರಿ ಕಾಮಗಾರಿ ಆರಂಭಿಸಲಾಗುವುದು. ನೂತನ ಬಿಆರ್‌ಸಿ ಕಚೇರಿ ಹಾಗೂ ಹುಣಸಗಿ ತಾಲೂಕಿಗೆ ಪ್ರತ್ಯೇಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಿಕ್ಷಕರಿಗಾಗಿ ಗುರು ಭವನ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಬಿಆರ್‌ಪಿ ಖಾದರ್ ಪಟೇಲ್, ಸರ್ಕಾರಿ ಬಾಲಕರ ಪ್ರೌಢಶಾಲೆ ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ, ಜಾನಕಿದೇವಿ ಪ್ರೌಢಶಾಲೆ ಮುಖ್ಯಶಿಕ್ಷಕ ಹಣಮಂತ ದೊರೆ ಮಾತನಾಡಿದರು. ಜಿಲ್ಲಾಮಟ್ಟ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ನಿವೃತ್ತ ಲೋಕಾಯುಕ್ತ ಎಸ್‌ಪಿ ಸಿ.ಎನ್ ಭಂಡಾರಿ, ಪ್ರಥಮ ದರ್ಜೆ ಗುತ್ತಿಗೆದಾರ ಯಂಕೋಬ ಸಾಹುಕಾರ, ಪ್ರಕಾಶ ಗುತ್ತೇದಾರ್, ರಮೇಶ ದೋರೆ, ವೆಂಕಟೇಶ ಬೇಟಗಾರ, ಗೋವಿಂದಪ್ಪ ಟಣಕೇದಾರ, ಮಲ್ಲಪ್ಪ ಚಂದನಕೇರಿ, ಟಿ.ಸಿ.ಸಜ್ಜನ್, ಸೋಮರೆಡ್ಡಿ ಮಂಗಿಹಾಳ, ಮಹೇಶ ಜಾಗೀರದಾರ್, ಶರಣಬಸವ ಗೋನಾಲ, ಬಸನಗೌಡ ವಠಾರ, ಸಾಬರಡ್ಡಿ, ಕೃಷ್ಣ ದರಬಾರಿ, ಮೌನೇಶ ಕಳಸ್ಕರ್, ನೋಡಲ್ ಅಧಿಕಾರಿ ಶಿವಪುತ್ರಪ್ಪ ಇತರರಿದ್ದರು.
ಮಲ್ಲಿಕಾರ್ಜುನ ಕಟ್ಟಿಮನಿ ಸ್ವಾಗತಿಸಿದರು. ಭೀಮಣ್ಣ ಕೋನಾಳ ವಂದಿಸಿದರು. ಮಹಾದೇವಪ್ಪ ಗುತ್ತೇದಾರ್ ನಿರೂಪಣೆ ಮಾಡಿದರು.