ಚಿಕ್ಕಮಗಳೂರಿನಲ್ಲಿ ನಡೆದ‌ ಕಾಂಗ್ರೆಸ್ ಶಾಸಕರು ಹಾಗೂ ಪ್ರಮುಖ ಮುಖಂಡರ ಸಭೆಯನ್ನುದ್ದೇಶಿಸಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲಾ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಶಾಸಕರಾದ ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ಜಿ.ಎಚ್.ಶ್ರೀನಿವಾಸ್, ಕೆ.ಎಸ್.ಅನಂದ್, ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಪ್ರಮುಖರಾದ ಶಿವಾನಂದ ಸ್ವಾಮಿ, ಎಚ್.ಪಿ.ಮಂಜೇಗೌಡ ಮತ್ತಿತರರಿದ್ದರು. 
ಜಿಲ್ಲೆ

ಮುಖಂಡರ ಸಭೆ ನಡೆಸಿದ ಸುರ್ಜೇವಾಲ

ಚಿಕ್ಕಮಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಗೆಲುವಿಗೆ ಸಂಬಂಧಿಸಿದಂತೆ ಯಾವ ರೀತಿಯ ಕಾರ್ಯ ಚಟುವಟಿಕೆ ಕೈಗೊಳ್ಳಬೇಕು ಹಾಗೂ ಪ್ರಚಾರ ವೈಖರಿ ಹೇಗಿರಬೇಕು ಎಂಬ ಬಗ್ಗೆ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲ ಶುಕ್ರವಾರ ಕಾಂಗ್ರೆಸ್ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.

ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು ಸಂಜೆ ವೇಳೆಗೆ ದಿಢೀರ್ ಚಿಕ್ಕಮಗಳೂರಿಗೆ ಆಗಮಿಸಿ, ಹೋಟೆಲ್ ನಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಪ್ರಮುಖರ ಸಭೆ ನಡೆಸಿದರು. ಕ್ಷೇತ್ರದಲ್ಲಿನ ವಸ್ತುಸ್ಥಿತಿ ಹಾಗೂ ಪ್ರಚಾರದ ಬಗ್ಗೆ ಶಾಸಕರು ಹಾಗೂ ನಾಯಕರಿಂದ ಮಾಹಿತಿ ಪಡೆದ ಅವರು, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಗೆಲುವೊಂದೇ ನಮ್ಮ ಗುರಿಯಾಗಬೇಕು. ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಬಿರುಸಿನ ಪ್ರಚಾರ ನಡೆಸುವ ಮೂಲಕ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು ಎನ್ನಲಾಗಿದೆ.
ಸಭೆಗೆ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪ್ರಮುಖ ನಾಯಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಎಲ್ಲಾ ನಾಯಕರಿಂದಲೂ ಚುನಾವಣಾ ರಣತಂತ್ರದ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ‌.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಶಾಸಕರಾದ ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ಜಿ.ಎಚ್.ಶ್ರೀನಿವಾಸ್, ಕೆ.ಎಸ್.ಅನಂದ್, ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಪ್ರಮುಖರಾದ ಶಿವಾನಂದ ಸ್ವಾಮಿ, ಎಚ್.ಪಿ.ಮಂಜೇಗೌಡ ಮತ್ತಿತರರಿದ್ದರು.