ಜಿಲ್ಲೆ

ತುಮಕೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಕಗ್ಗಂಟು!

ತುಮಕೂರು: ಜಿಲ್ಲೆಯಲ್ಲಿ ಮಾದಿಗ ಸಮುದಾಯ ಹಾಗೂ ಕಾಡುಗೊಲ್ಲರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಕೈ ಅಭ್ಯರ್ಥಿಗಳು ಸ್ಪರ್ಧೆಗೆ ಹಿಂದೇಟು ಹಾಕಿರುವುದು ಕಾಂಗ್ರೆಸ್ ವರಿಷ್ಠರ ನಿದ್ದೆಗೆಡಿಸಿದೆ. ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದ್ದು ಸರಿಪಡಿಸಬೇಕೆಂದು ಚಿತ್ರದುರ್ಗ ಜಿಲ್ಲೆಯ ಅಭ್ಯರ್ಥಿಗಳು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೇವಾಲ ಸೋಮವಾರ ತುಮಕೂರಿಗೆ ಆಗಮಿಸಿ ಟಿಕೆಟ್ ಆಕಾಂಕ್ಷಿಗಳ ಜತೆ ತುರ್ತು ಸಭೆ ನಡೆಸಿದ್ದಾರೆ.

ಏ.10ರಂದು ರಾಹುಲ್‌ಗಾಂಧಿ ಕೋಲಾರಕ್ಕೆ ಆಗಮಿಸುತ್ತಿರುವ ನೆಪದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಮಹತ್ವದ ಸಭೆಯಲ್ಲಿ ಜಿಲ್ಲೆಯಲ್ಲಿ ಕಾಡುಗೊಲ್ಲ ಹಾಗೂ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡದಿದ್ದರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಅಸಾಧ್ಯ ಎಂಬುದನ್ನು ಸುರ್ಜೇವಾಲಗೆ ಚಿತ್ರದುರ್ಗದ ಮುಖಂಡರು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವ ಎಚ್.ಆಂಜನೇಯ, ಡಿ.ಸುಧಾಕರ್, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ ಸೇರಿ ಜಿತ್ರದುರ್ಗ ಜಿಲ್ಲೆಯ ಮುಖಂಡರೆಲ್ಲರೂ ಸಭೆಯಲ್ಲಿ ಭಾಗವಹಿಸಿ ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಪಾವಗಡ ಟಿಕೆಟ್ ಬಯಸಿದ್ದ ಚಿತ್ರದುರ್ಗ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಗೈರು ಗಮನ ಸೆಳೆದಿದೆ.

ಚಿತ್ರದುರ್ಗ ನಗರ ಕ್ಷೇತ್ರದಿಂದ ಟಿಕೆಟ್ ಬಯಸಿರುವ ರಘು ಆಚಾರ್, ವೀರೇಂದ್ರ ಪಪ್ಪಿ ನಡುವೆ ಬಿಗ್ ಫೈಟ್ ನಡೆದಿದೆ. ಮೊಳಕಾಲ್ಮೂರು, ಚಿತ್ರದುರ್ಗ ನಗರ ಹಾಗೂ ಹೊಳಲ್ಕೆರೆ ಕ್ಷೇತ್ರದ ಬಗ್ಗೆ ವಿಶೇಷ ಚರ್ಚೆ ನಡೆದಿದ್ದು, ಚಿತ್ರದುರ್ಗ ಜಿಲ್ಲೆಯ ಮುಖಂಡರೆಲ್ಲಾ ಒಗ್ಗಟ್ಟಿನಿಂದಲೇ ಟಿಕೆಟ್‌ಗೆ ಬೇಡಿಕೆಯಿಟ್ಟಿರುವುದು ಹೈಕಮಾಂಡ್ ನಿದ್ದೆಗೆಡಿಸಿದೆ.
ಸಮರ್ಥ ಅಭ್ಯರ್ಥಿ ಇಲ್ಲದೆ ತುಮಕೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಕಗ್ಗಂಟಾಗಿದ್ದು ಮತ್ತಷ್ಟು ದಿನ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲಾಗಿದೆ. ಒಂದೆರಡು ದಿನದಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಲಿರುವ ಎರಡನೇ ಪಟ್ಟಿಯಲ್ಲಿ ಗುಬ್ಬಿ ಕ್ಷೇತ್ರದಿಂದ ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಟಿಕೆಟ್ ಆಯ್ಕೆ ಬಗ್ಗೆ ಬೇಸರಗೊಂಡಿರುವ ಮುಖಂಡರು ಬೆಂಬಲಿಗರ ಮೂಲಕ ಗಲಾಟೆ ಮಾಡುವ ಮುನ್ಸೂಚನೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಬದಲಾಗಿ ತುಮಕೂರು ನಗರದಲ್ಲಿ ಜಿಲ್ಲೆಯ ಸಭೆ ನಡೆದಿದೆ. ಚಿತ್ರದುರ್ಗ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುರಳೀಧರ ಹಾಲಪ್ಪ, ಚಂದ್ರಶೇಖರಗೌಡ, ಶಶಿಹುಲಿಕುಂಟೆಮಠ್ ಮತ್ತಿತರರು ಸಭೆಯಲ್ಲಿದ್ದರು.

ತುಮಕೂರು ಗ್ರಾಮಾಂತರಕ್ಕೆ ‘ಕಾಡುಗೊಲ್ಲ’ ಅಭ್ಯರ್ಥಿ?

ಕಾಡುಗೊಲ್ಲ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕು ಎಂದು ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳು ಪಟ್ಟು ಹಿಡಿದಿರುವುದು ಹೈಕಮಾಂಡ್‌ಗೆ ನುಂಗಲಾರದ ಬಿಸಿತುಪ್ಪವಾಗಿದೆ.

ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿರುವ ಕಾಡುಗೊಲ್ಲ ಹಾಗೂ ಮಾದಿಗ ಸಮುದಾಯವನ್ನು ಕಡೆಗಣಿಸಿ ಪೂರಕ ಫಲಿತಾಂಶ ಪಡೆಯುವುದು ಅಸಾಧ್ಯ ಎಂಬ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ರಾಜ್ಯದಲ್ಲಿ ಒಂದಾದರೂ ಕ್ಷೇತ್ರದಲ್ಲಿ ಕಾಡುಗೊಲ್ಲರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್‌ಗೆ ಅನಿವಾರ್ಯ ಎನ್ನಿಸಿದ್ದು ಮ್ಯಾಚ್‌ಫಿಕ್ಸಿಂಗ್‌ಗೆ ಮೀಸಲಾಗಿರುವ ತುಮಕೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಡುಗೊಲ್ಲರಿಗೆ ಟಿಕೆಟ್ ಕೊಟ್ಟು ಸಮುದಾಯದ ಮೂಗಿಗೆ ತುಪ್ಪ ಸವರುವ ಮಾಸ್ಟರ್‌ಪ್ಲಾನ್ ಸಿದ್ಧವಾಗುತ್ತಿದೆ.

ಶಿರಾದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಸಾಸಲು ಸತೀಶ್ ಕೂಡ ಜಿಲ್ಲೆಯ ಪ್ರಭಾವಿ ಮುಖಂಡರೇ ನನಗೆ ಶಿರಾದಲ್ಲಿ ಟಿಕೆಟ್ ತಪ್ಪಿಸಿದ್ದು ಈ ಬಗ್ಗೆ ಏ.20ರ ನಂತರ ಅವರ ಹೆಸರು ಬಹಿರಂಗಪಡಿಸುತ್ತೇನೆ ಎಂದು ಸವಾಲೆಸೆದಿದ್ದಾರೆ.